ಮಂಡ್ಯ: ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿದ್ದು ಕೆ.ಆರ್ ಪೇಟೆಯಲ್ಲಿ ಭರ್ಜರಿ ಜಯಸಾಧಿಸಿದೆ. ಸಿಎಂ ಬಿಎಸ್‍ವೈ ತವರಿನಲ್ಲಿ ಮೊದಲ ಬಾರಿಗೆ ಕಮಲ ಅರಳಿದ್ದು, ಸಿಎಂ ಪುತ್ರ ವಿಜಯೇಂದ್ರನ ಶ್ರಮಕ್ಕೆ ಫಲ ಸಿಕ್ಕಿದೆ.
ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ 9,509 ಮತಗಳಿಂದ ಗೆಲ್ಲುವ ಮೂಲಕ ಮಂಡ್ಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಎಲ್ಲ 7 ಕ್ಷೇತ್ರಗಳನ್ನು ಜೆಡಿಎಸ್ ಗೆದ್ದ ಹಿನ್ನೆಲೆಯಲ್ಲಿ ಈ ಬಾರಿ ಇಲ್ಲಿ ಗೆಲ್ಲುವುದು ಕಷ್ಟ ಎನ್ನಲಾಗಿತ್ತು. ಆದರೆ ಎಲ್ಲ ವಿಶ್ಲೇಷಣೆಗಳು ವಿಜಯೇಂದ್ರ ಅವರ ಸ್ಟಾಟರ್ಜಿಗೆ ತಲೆಕೆಳಗಾಗಿದ್ದು ಮೊದಲ ಬಾರಿಗೆ ಬಿಜೆಪಿ ಜಯಭೇರಿ ಭಾರಿಸಿದೆ.
Advertisement
Advertisement
ನಮ್ಮ ತವರು ಜಿಲ್ಲೆಯಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿದ್ದ ವಿಜಯೇಂದ್ರ, ಇಪ್ಪತ್ತು ದಿನ ಕೆಆರ್ ಪೇಟೆಯಲ್ಲೇ ಇದ್ದರು. ಜೊತೆಗೆ 43 ರೋಡ್ ಶೋ, 10 ಬೈಕ್ ರ‍್ಯಾಲಿ ಮತ್ತು 20 ಕ್ಕಿಂತ ಹೆಚ್ಚು ಸಭೆಗಳನ್ನು ಮಾಡಿದ್ದರು. ಪ್ರತಿದಿನ ಊರಿನ ದೇವಸ್ಥಾನ, ಊರಿನ ಕಟ್ಟೆಯಲ್ಲಿ ಬಿಜೆಪಿ ಮುಖಂಡರು ಸಭೆ ಮಾಡಿದ್ದು, ಪಕ್ಷದ ಕಾರ್ಯಕರ್ತರ ಜೊತೆ ಊರಿನ ಮುಖಂಡರನ್ನು ಅವರು ವಿಜಯೇಂದ್ರ ಅವರ ಹತ್ತಿರಕ್ಕೆ ಕರೆದುಕೊಂಡು ಬಂದಿದ್ದರು. ಅವರ ಬೇಡಿಕೆಯ ಪಟ್ಟಿ ಕೇಳಿದ್ದ ವಿಜಯೇಂದ್ರ ಅವರು ಪ್ರತಿ ಮುಖಂಡರಿಗೆ ತನ್ನ ಫೋನ್ ನಂಬರ್ ಹಾಗೂ ಪಿಎ ನಂಬರ್ ಅನ್ನುಕೊಟ್ಟು ಸಮಸ್ಯೆಯನ್ನು ಆಲಿಸಿ ಅದಕ್ಕೆ ಬೇಕಾದ ಪರಿಹಾರವನ್ನು ಮಾಡಿಸಿಕೊಟ್ಟಿದ್ದರು.
Advertisement
Advertisement
ಸಚಿವ ಮಾಧುಸ್ವಾಮಿಯ ಹೇಳಿಕೆಯಿಂದ ಡ್ಯಾಮೇಜ್ ಆಗುತ್ತಿದ್ದಂತೆ ಅಶ್ವಥ್ ನಾರಾಯಣರನ್ನು ತನ್ನ ಜೊತೆ ಉಸ್ತುವಾರಿಗೆ ಸೇರಿಸಿಕೊಂಡು ಒಕ್ಕಲಿಗ ಮತ ಸೆಳೆಯುವಲ್ಲಿ ಬಿಜೆಪಿ ಸಫಲವಾಗಿತ್ತು. ಇದರ ಜೊತೆಗೆ ವಿಜಯೇಂದ್ರ ಅವರು ಯುವಜನರ ಜೊತೆ ಸಮಾಲೋಚನೆ ನಡೆಸಿ ತನ್ನ ತಂದೆಯವರ ಹುಟ್ಟೂರು ಇದು ಇಲ್ಲಿ ಬಿಜೆಪಿ ಗೆದ್ದರೇ ನಿಮ್ಮೂರಿನ ಅಭಿವೃದ್ಧಿಯಾಗುತ್ತೆ ಎಂದು ಭಾವನಾತ್ಮಕ ದಾಳ ಉರುಳಿಸಿದ್ದರು. ಈ ಎಲ್ಲಾ ಕಾರಣದಿಂದ ಬಿಜೆಪಿ ಮೊದಲ ಬಾರಿಗೆ ಮಂಡ್ಯದಲ್ಲಿ ತನ್ನ ಖಾತೆ ತೆರೆದಿದೆ.
ಮತ ಎಣಿಕೆಯ ಮೊದಲ ಮೂರು ಸುತ್ತಿನಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿತ್ತು. 4ನೇ ಸುತ್ತಿನಲ್ಲಿ ನಾರಾಯಣ ಗೌಡರಿಗೆ ಮನ್ನಡೆ ಸಿಗಲು ಆರಂಭವಾಯಿತು. ಕೊನೆಗೆ 17ನೇ ಸುತ್ತು ಮುಕ್ತಾಯದ ವೇಳೆ ನಾರಾಯಣ ಗೌಡ 9,509 ಮತಗಳ ಅಂತರದಿಂದ ಜಯಗಳಿಸಿದರು. ಬಿಜೆಪಿ 62,265 ಮತಗಳನ್ನು ಪಡೆದರೆ ಜೆಡಿಎಸ್ 52,756 ಮತಗಳನ್ನು ಪಡೆದಿದೆ. ಕಾಂಗ್ರೆಸ್ 37,938 ಮತಗಳನ್ನು ಪಡೆದಿದೆ.