ಮಂಡ್ಯ: ತಾಲೂಕಿನ ಕೆರಗೋಡಿನಲ್ಲಿ (Keragodu) ಹನುಮ ಧ್ವಜ ಇಳಿಸಿದ ವಿಚಾರಕ್ಕೆ (Hanuman Flag Clash) ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗ್ರಾಮದ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದ್ದು ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಇನ್ನೂ ಹಿಂದೂ ಪರ ಸಂಘಟನೆಗಳು ಫೆಬ್ರವರಿ 9 ರಂದು ಮಂಡ್ಯ (Mandya) ಬಂದ್‍ಗೆ ಕರೆಕೊಟ್ಟಿದ್ದು, ಬಿಜೆಪಿ ಹಾಗೂ ಜೆಡಿಎಸ್ ಬಂದ್‍ಗೆ ಬೆಂಬಲ ಸೂಚಿಸಿವೆ.
ಘಟನೆ ಖಂಡಿಸಿ ಈಗಾಗಲೇ ಬಿಜೆಪಿ (BJP) ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿ ಜಿಲ್ಲೆಗಳಲ್ಲೂ ಹನುಮ ಧ್ವಜ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಿಟ್ಟು ಹನುಮ ಧ್ವಜ ತೆಗಿಸಿದ್ದಾರೆ. ರಾಜ್ಯದ ಶಾಂತಿ ಸುವ್ಯವಸ್ಥೆ ಕದಡಲು ಕಾಂಗ್ರೆಸ್ (Congress) ಮುಂದಾಗಿದೆ. ಅಲ್ಪ ಸಂಖ್ಯಾತರನ್ನು ಒಲೈಸಲು ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ. ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮಾಜಿ ಸಿಎಂ ಹೆಚ್‍ಡಿಕೆ (HD Kumaraswamy) ಸಹ ಈ ಸಂಬಂಧ ತೀವ್ರವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹನುಮಂತನ ಕೆಣಕಿದ್ದಕ್ಕೆ ಲಂಕ ದಹನವಾಯ್ತು, ಅದೇ ರೀತಿ ನಿಮ್ಮ ಅವನತಿಯಾಗುತ್ತೆ: ಹೆಚ್‍ಡಿಕೆ ವಾಗ್ದಾಳಿ
ಅಲ್ಲದೇ ಮಂಡ್ಯದ ಮಹಾವೀರ ಸರ್ಕಲ್‍ನಲ್ಲಿ, ಹನುಮ ಧ್ವಜ ಇಳಿಸಿದ್ದನ್ನು ಖಂಡಿಸಿ ನಡೆದ ಪಾದಯಾತ್ರೆ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದನ್ನು ಖಂಡಿಸಿ ರಸ್ತೆಯಲ್ಲಿಯೇ ಕುಳಿತು ಪಾದಯಾತ್ರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಾದಯಾತ್ರೆ ವೇಳೆ ಶಾಸಕ ಗಣಿಗ ರವಿ ಅವರ ಫ್ಲೆಕ್ಸ್‍ಗಳನ್ನು ಪ್ರತಿಭಟನಾಕಾರರು ಕಿತ್ತೆಸೆದಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜವನ್ನು ಹಾರಿಸುತ್ತೇವೆಂದು ಅನುಮತಿ ಪಡೆದು, ಹನುಮ ಧ್ವಜ ಹಾರಿಸಿದ್ದಾರೆ. ಅದೇ ರೀತಿ ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟಿದ್ದಾರೆ. ಯಾವುದೇ ಧರ್ಮದ ಬಾವುಟವನ್ನು ಆ ಕಂಬದಲ್ಲಿ ಹಾರಿಸುವುದಿಲ್ಲ ಎಂದಿದ್ದರು. ಈಗ ಹನುಮ ಧ್ವಜ ಹಾಕಿದ್ದಾರೆ. ಅದು ಅವರೇ ಬರೆದುಕೊಟ್ಟ ಮುಚ್ಚಳಿಕೆಗೆ ವಿರುದ್ಧವಾಗಿದೆ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಆಗಿದ್ದವರು. ಅವರೇ ಪ್ರತಿಭಟನೆಗೆ ಹೋಗ್ತಾರೆ ಎಂದರೆ, ಅದು ಪ್ರಚೋದನೆ ಮಾಡುವುದಕ್ಕೆ, ಚುನಾವಣಾ ರಾಜಕೀಯಕ್ಕೆ ಎಂದು ವ್ಯಂಗ್ಯವಾಡಿದ್ದಾರೆ. ಇದು ರಾಜಕೀಯ ಕುತಂತ್ರ. ಅಲ್ಲಿ ಸರ್ಕಾರದ ಯಾವುದೇ ವೈಫಲ್ಯ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜಕೀಯ ಮಾಡೋದು ಬಿಟ್ಟು ಜನರ ಭಾವನೆಗಳಿಗೆ ಬೆಲೆ ಕೊಡಲಿ: ಅಶ್ವಥ್ ನಾರಾಯಣ್