ಮಂಡ್ಯ: ಮೈತ್ರಿ ಸರ್ಕಾರ ಅಂತ್ಯ ಆಗುವುದು ಪಕ್ಕಾ. ಮೈತ್ರಿ ಮುರಿದ ಬಳಿಕ ಜೆಡಿಎಸ್ ಸತ್ತು ಹೋಗುತ್ತದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಭವಿಷ್ಯ ನುಡಿದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ತಮ್ಮ ಪಕ್ಷದಲ್ಲಿ 125 ಶಾಸಕರು ಇರೋ ಹಾಗೇ ಸರ್ಕಾರ ನಡೆಸಲು ಮುಂದಾಗಿದ್ದು ತಪ್ಪು. ಹೆಚ್ಚು ಶಾಸಕರಿರುವ ಕಾಂಗ್ರೆಸ್ ಪಕ್ಷದ ಮಾತನ್ನು ಕೇಳದೇ ಆಡಳಿತ ನಡೆಸಿದ್ದಕ್ಕೆ ಸಿಟ್ಟಾಗಿ ನಮ್ಮ ಶಾಸಕರು ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ಸಹವಾಸ ಬಿಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಸ್ಪರ್ಧೆ ನಡೆಯುತ್ತದೆ ಎಂದು ಹೇಳಿದರು.
ಕೆ.ಆರ್ ಪೇಟೆ ಅಭಿವೃದ್ಧಿಗೆ ರಾಜೀನಾಮೆ ಕೊಟ್ಟಿದ್ದೇನೆ ಎಂಬ ನಾರಾಯಣಗೌಡರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಗೆ ಆತ ಮಾರಾಟವಾಗಿದ್ದಾನೆ. ಕುಣಿಯಲಾರದ ವೇಶ್ಯೆ ನೆಲ ಡೊಂಕು ಎಂಬಂತೆ ನಾರಾಯಣಗೌಡ ಮಾತನಾಡ್ತಿದ್ದಾನೆ ಎಂದು ಏಕವಚನದಲ್ಲೇ ಕಿಡಿಕಾರಿದರು.
ನಾನು ಈ ಹಿಂದೆಯೇ ಲೋಕಸಭಾ ಚುನಾವಣೆ ಮುಗಿದ ಬಳಿಕ ಅವನು ಪಕ್ಷ ಬಿಡುತ್ತಾನೆ ಎಂದು ಹಿಂದೆ ಹೇಳಿದ್ದ ಭವಿಷ್ಯ ನಿಜವಾಗಿದೆ. ಆತ ಹಣ ಮಾಡಲು ಕೆ.ಆರ್ ಪೇಟೆಗೆ ಬಂದಿದ್ದ. ಮುಖ್ಯಮಂತ್ರಿ ಹಾಗೂ ಬಿಜೆಪಿ ಅವರ ಹತ್ತಿರ ಹಣ ಮಾಡಿಕೊಂಡು ಮುಂಬೈಗೆ ವಾಪಸ್ಸಾಗಿದ್ದಾನೆ. ಆತ ಮತ್ತೆ ರಾಜಕೀಯಕ್ಕೆ ಬರಲ್ಲ ಮುಂಬೈನಲ್ಲೇ ನೆಲೆಯಾಗುತ್ತಾನೆ. ಕೆ.ಸಿ.ನಾರಾಯಣಗೌಡ ಒಬ್ಬ ನಾಯಿ. ನನ್ನ ಒಂದು ಕೂದಲಿಗೂ ಆತ ಸಮವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಿಖಿಲ್ ಕುಮಾರಸ್ವಾಮಿ ಕೆ.ಆರ್.ಪೇಟೆಯಿಂದ ಚುನಾವಣೆಗೆ ಸ್ಪರ್ಧೆ ವಿಚಾರ ಕೇಳಿದಾಗ, ಹಾಗಾದರೆ ಮಂಡ್ಯದಲ್ಲಿ ಬಂದ ಫಲಿತಾಂಶ ಕೆ.ಆರ್ ಪೇಟೆಯಲ್ಲಿ ರಿಪೀಟ್ ಆಗುತ್ತೆ. ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಲಿ. ನಿಖಿಲ್ ಬೇಕಂದರೆ ಹಾಸನದಲ್ಲಿ ಹೋಗಿ ಸ್ಪರ್ಧೆ ಮಾಡಲಿ ಎಂದು ಹೇಳಿದರು.