ಮಂಡ್ಯ: ಉಪಚುನಾವಣೆ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆಯಲ್ಲಿ ಬಾಡೂಟದ ಪೈಪೋಟಿ ಶುರುವಾಗಿದೆ. ಒಂದೇ ದಿನ ಎರಡು ಕಡೆ ಬಾಡೂಟ ಮಾಡಿಸಲಾಗಿದ್ದು, ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಇಂದು ಬಾಡೂಟದ ಹಬ್ಬವನ್ನೇ ಏರ್ಪಡಿಸಲಾಗಿತ್ತು.
ಸಾಧುಗೋನ ಹಳ್ಳಿ ಗ್ರಾಮದಲ್ಲಿ ಅನರ್ಹ ಶಾಸಕ ನಾರಾಯಣಗೌಡರಿಂದ ಬಾಡೂಟ ಆಯೋಜನೆ ಮಾಡಿದರೆ, ಇತ್ತ ನೀತಿಮಂಗಲ ಗ್ರಾಮದಲ್ಲಿ ಜೆಡಿಎಸ್ ನಾಯಕರಿಂದ ಬಾಡೂಟ ಆಯೋಜನೆ ಮಾಡಲಾಗಿತ್ತು. ಎರಡು ಕಡೆಗಳಲ್ಲಿ ಕಾರ್ಯಕರ್ತರು ಮದ್ಯ ಸೇವನೆ, ಬಾಡೂಟ ಸವಿದು ಸಂತೃಪ್ತರಾಗಿದ್ದಾರೆ.
Advertisement
Advertisement
ಎರಡು ಬಾಡೂಟ ಕಾರ್ಯಕ್ರಮಗಳಲ್ಲೂ ಕಾರ್ಯಕರ್ತರು ತುಂಬಿ ತುಳುಕುತ್ತಿದ್ದರು. ಬಾಡೂಟದಲ್ಲಿ ಕ್ವಿಂಟಾಲ್‌ಗಟ್ಟಲೆ ಮಟನ್, ಚಿಕನ್, 5 ಸಾವಿರ ಮೊಟ್ಟೆ, ಬೋಟಿ ಗೊಜ್ಜು, ಮುದ್ದೆ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕರ್ತರು, ಬೆಂಬಲಿಗರಿಗೆ ಊಟಕ್ಕೂ ಮುನ್ನ ಮದ್ಯದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಮದ್ಯ ಸೇವನೆ ಬಳಿಕ ಭರ್ಜರಿ ಬಾಡೂಟ ಸವಿದಿದ್ದಾರೆ.
Advertisement
ಕೆ.ಆರ್.ಪೇಟೆ ತಾಲೂಕಿನ ನೀತಿ ಮಂಗಲದ ಸಭೆಯಲ್ಲಿ ಭಾಗವಹಿಸಿದ ಜೆಡಿಎಸ್ ಕಾರ್ಯಕರ್ತರಿಗೆ ಬಾಡೂಟ ಮಾಡಿಸಲಾಗಿತ್ತು. 8 ಕ್ವಿಂಟಲ್ ಮಟನ್, 3 ಕ್ವಿಂಟಲ್ ಚಿಕನ್ ಹಾಗೂ 5 ಸಾವಿರ ಮೊಟ್ಟೆ ಜೊತೆಗೆ ರಾಗಿ ಮುದ್ದೆ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. ಬಾಡೂಟದ ಜೊತೆಗೆ ಮದ್ಯದ ವ್ಯವಸ್ಥೆಯನ್ನೂ ಮುಖಂಡರು ಮಾಡಿದ್ದರು.
Advertisement
ಮುಖಂಡರಿಗೆ ಒಳ್ಳೆಯ ಗುಣಮಟ್ಟದ ಮದ್ಯ, ಸಾಮಾನ್ಯ ಕಾರ್ಯಕರ್ತರಿಗೆ ಸಾಮಾನ್ಯ ಮದ್ಯ ನೀಡುವ ಮೂಲಕ ಮತಗಳನ್ನು ಬಿಗಿ ಮಾಡಿಕೊಳ್ಳಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ. ಊಟದ ವ್ಯವಸ್ಥೆ ಸ್ಥಳದಲ್ಲೇ ಗೂಡ್ಸ್ ವಾಹನ ನಿಲ್ಲಿಸಿಕೊಂಡು ಮದ್ಯ ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಲ್ಲೇ ನೀರಿನ ಬಾಟಲಿ ನೀಡಲಾಗಿದ್ದು, ಎಣ್ಣೆ ಜೊತೆ ನೀರು ಬೆರೆಸಿ ಕುಡಿದು ಕಾರ್ಯಕರ್ತರು ಭರ್ಜರಿ ಬಾಡೂಟ ಸವಿದಿದ್ದಾರೆ.
ಈ ಕುರಿತು ಕೆ.ಆರ್.ಪೇಟೆ ಸಾದುಗೋನಹಳ್ಳಿಯಲ್ಲಿ ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ಚುನಾವಣೆಗಾಗಿ ಊಟದ ವ್ಯವಸ್ಥೆ ಮಾಡಿಲ್ಲ. ನನ್ನ ಮಗಳ ಮದುವೆ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಊಟ ಹಾಕಿಸಿರಲಿಲ್ಲ. ನಾನು ಎಲ್ಲರ ಮನೆಯಲ್ಲೂ ಊಟ ಮಾಡಿದ್ದೀನಿ. ಹಾಗಾಗಿ ಈಗ ಅವರಿಗೆ ಅನ್ನ ಹಾಕಿಸುತ್ತಿದ್ದೇನೆ ಎಂದು ತಿಳಿಸಿದರು.