ಬೆಂಗಳೂರು: ನಾವು ರೈತಾಪಿ ಕುಟುಂಬದವರು. ಐಟಿಯವರು ದಾಳಿ ನಡೆಸಿದರೂ ನಮ್ಮ ಮನೆಯಲ್ಲಿ ಏನು ಸಿಗುವುದಿಲ್ಲ. ನಮ್ಮ ಎಲ್ಲ ವ್ಯವಹಾರಗಳಿಗೆ ಲೆಕ್ಕವಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ.
ಐಟಿ ದಾಳಿ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇವತ್ತು ಬೆಳಗ್ಗೆ 5:30ಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ನನಗೆ 10 ರೂ. ಬಂದರೂ ಅದಕ್ಕೂ ಲೆಕ್ಕ ಇದೆ. 1985 ರಿಂದಲೂ ನಾವು ಈ ವಿಚಾರದಲ್ಲಿ ಪಕ್ಕಾ ಇದ್ದೇವೆ. ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
Advertisement
Advertisement
ಜೆಡಿಎಸ್ ನಾಯಕರು, ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಯಲಿದೆ ಎನ್ನುವ ಮಾಹಿತಿ ಇತ್ತು. ಆದರೆ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವನ ಮನೆ ಮೇಲೆ ದಾಳಿ ನಡೆಯುತ್ತದೆ ಎಂದು ಭಾವಿಸಿರಲಿಲ್ಲ ಎಂದರು.
Advertisement
ಚುನಾವಣೆ ಸಮಯದಲ್ಲಿ ದಾಳಿ ನಡೆಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಬೇಕು. ಈ ದಾಳಿಯಿಂದ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ಬಂದಿದೆ. ಇಂದು ನಾನು ಚುನಾವಣಾ ಪ್ರಚಾರಕ್ಕೆ ತೆರಳುತ್ತೇನೆ ಎಂದು ಹೇಳಿದರು.
Advertisement
ನಾನು ಸಿಎಂ ಆಪ್ತ ಎನ್ನುವ ಕಾರಣಕ್ಕೆ ದಾಳಿ ಮಾಡಿದ್ದಾರೆ. ಬಿಜೆಪಿ ನಾಯಕರ ಮನೆಯಲ್ಲಿ ನೋಟು ಎಣಿಸುವ ಯಂತ್ರಗಳಿದ್ದರೂ ಯಾಕೆ ದಾಳಿ ಮಾಡುತ್ತಿಲ್ಲ. ಈ ರೀತಿ ದಾಳಿ ನಡೆಸಿ ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.
ಪುಟ್ಟರಾಜು ಸ್ವಗ್ರಾಮ ಚಿನಕುರಳಿಯಲ್ಲಿರುವ ಮನೆ ಮೇಲೆ ಬೆಳಗ್ಗೆ ಐಟಿ ದಾಳಿ ನಡೆದಿದೆ. ಮೈಸೂರಿನ ವಿಜಯನಗರದಲ್ಲಿರುವ ಪುಟ್ಟರಾಜು ಅಣ್ಣನ ಮಗ ಅಶೋಕ್ ಮನೆ ಮೇಲೆಯೂ ದಾಳಿ ನಡೆದಿದೆ. ನಸುಕಿನ ಜಾವದಿಂದ ಪುಟ್ಟರಾಜು ನಿವಾಸ, ಸಂಬಂಧಿಗಳ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.