ಮಂಡ್ಯ: ಅಂತರ್ಜಾತಿ ವಿವಾಹವಾಗಿದ್ದ ನವವಿವಾಹಿತೆ ಅನುಮಾನಾಸ್ಪದ ರೀತಿ ಸಾವನ್ನಪ್ಪಿದ ಘಟನೆ ಮಂಡ್ಯ ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ಮಾಚಹಳ್ಳಿ ಗ್ರಾಮದ ಅರ್ಪಿತಾ (19) ಮೃತ ನವವಿವಾಹಿತೆ. ನೇಣು ಬಿಗಿದ ಸ್ಥಿತಿಯಲ್ಲಿ ಅರ್ಪಿತಾ ಮೃತದೇಹವು ಪತಿ ಯತೀನ್ ಮನೆಯಲ್ಲಿ ಪತ್ತೆಯಾಗಿದೆ. ಮಗಳನ್ನು ಹತ್ಯೆ ಮಾಡಿ, ನೇಣು ಹಾಕಿದ್ದಾರೆ ಎಂದು ಅರ್ಪಿತಾ ಪೋಷಕರು, ಯತೀನ್ ಹಾಗೂ ಆತನ ಮನೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಯತೀನ್ ಹಾಗೂ ಅರ್ಪಿತಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಜಾತಿಯು ಬೇರೆ ಬೇರೆ ಆಗಿದ್ದರಿಂದ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಪೋಷಕರ ವಿರೋಧದ ನಡುವೆಯೂ ಎರಡೂವರೆ ತಿಂಗಳ ಹಿಂದೆಯಷ್ಟೆ ಯತೀನ್ ಹಾಗೂ ಅರ್ಪಿತಾ ವಿವಾಹವಾಗಿದ್ದರು. ಬಳಿಕ ಅರ್ಪಿತಾ ಪತಿಯ ಮನೆಯಲ್ಲಿ ವಾಸವಿದ್ದಳು.
ಮನೆಯಲ್ಲಿ ಯಾರು ಇಲ್ಲದೆ ಇರುವಾಗ ಅರ್ಪಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯತೀನ್ ಹಾಗೂ ಆತನ ಪೋಷಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆದರೆ ಇದನ್ನು ತಳ್ಳಿ ಹಾಕಿರುವ ಅರ್ಪಿತಾ ಪೋಷಕರು, ಗಂಡನ ಮನೆಯವರೇ ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಅರ್ಪಿತಾ ಪೋಷಕರು, ಯತೀನ್ ಹಾಗೂ ಆತನ ಮನೆಯವರ ವಿರುದ್ಧ ಶಿವಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.