ಮಂಡ್ಯ: ಕಲುಷಿತ ಆಹಾರ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೇಘಾಲಯ ರಾಜ್ಯದ ಹಾಗೂ ಸ್ಥಳೀಯ ವಿದ್ಯಾರ್ಥಿಗಳು ಗುಣಮುಖರಾದ ಬಳಿಕ ಮರು ಪರೀಕ್ಷೆಗೆ ವ್ಯವಸ್ಥೆ ಮಾಡುವಂತೆ ಮಂಡ್ಯ ಡಿಸಿ ಡಾ.ಕುಮಾರ ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದ 22 ವಿದ್ಯಾರ್ಥಿಗಳು ಹಾಗೂ ಸ್ಥಳೀಯ 14 ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಗುಣಮುಖರಾದ ನಂತರ ಶೈಕ್ಷಣಿಕ ವರ್ಷದ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು. ಅಲ್ಲದೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವೈದ್ಯರ ಸಲಹೆ ಹಾಗೂ ಪೋಷಕರ ಒಪ್ಪಿಗೆ ಪಡೆದು ಪರೀಕ್ಷೆ -1 ಬರೆಯಲಿ, ಇಲ್ಲವಾದಲ್ಲಿ ಪರೀಕ್ಷೆ-2 ಬರೆಯಲು ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೇಘಲಾಯ ರಾಜ್ಯದ 22 ವಿದ್ಯಾರ್ಥಿಗಳು 1 ರಿಂದ 9ನೇ ತರಗತಿ ಒಳಗಿನವರಾಗಿದ್ದಾರೆ. ಅವರು ಗುಣಮುಖರಾದ ಬಳಿಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರ ಮಾಡಲಾಗುವುದು. ಬಾಲಮಂದಿರದಲ್ಲಿ ಅವರಿಗೆ ವಾಸ್ತವ್ಯ ಹಾಗೂ ವೈದ್ಯರ ಸಲಹೆಯಂತೆ ಆಹಾರ ಒದಗಿಸಲಾಗುವುದು ವಿವರಿಸಿದರು.
ಚಿಕಿತ್ಸೆ ಪಡೆಯುತ್ತಿರುವ ಮೇಘಾಲಯ ವಿದ್ಯಾರ್ಥಿಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರ ಮಾಡಿದ ನಂತರ ಮೇಘಾಲಯ ಸರ್ಕಾರ ನಿಯೋಜಿಸಿರುವ ಅಧಿಕಾರಿಗಳು ಪೋಷಕರ ಗಮನಕ್ಕೆ ತರಲಿದ್ದಾರೆ. ನಂತರ ಮಕ್ಕಳ ಪೋಷಕರು ಅವರ ಆಧಾರ್ ಗುರುತಿನ ಚೀಟಿಯೊಂದಿಗೆ ಆಗಮಿಸಿ ಮಕ್ಕಳ ರಕ್ಷಣಾ ಘಟಕಕ್ಕೆ ಪತ್ರ ನೀಡಿ ಬಳಿಕ ಮಕ್ಕಳನ್ನು ಕರೆದುಕೊಂಡು ಹೋಗಬಹುದು ತಿಳಿಸಿದರು.
ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷ ಅಂತ್ಯವಾಗುತ್ತಿದ್ದು, ಗೋಕಲ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸ್ಥಳೀಯ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಸಬೇಕು. ಜೊತೆಗೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತಂದು ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿ, ಅಗತ್ಯವಿದ್ದಲ್ಲಿ ಶಿಕ್ಷಣ ಇಲಾಖೆಯಿಂದಲೂ ಸಿಬ್ಬಂದಿ ನಿಯೋಜಿಸಿ. ಇನ್ನೊಂದು ಭಾಗದಲ್ಲಿ ಶಾಲೆಗೆ ನೋಟೀಸ್ ನೀಡುವ ಕೆಲಸ ನಡೆಯುತಿರಲಿ ಎಂದು ತಾಕೀತು ಮಾಡಿದರು.