ಮಂಡ್ಯ: ಸುಗ್ಗಿ ಕಾಲ ಬಂತು ಎಂದರೆ ಕಟಾವಿಗೆ ಬಂದ ಬೆಳೆಯನ್ನು ಕಟಾವು ಮಾಡಿ ಕಣದಲ್ಲಿ ಒಕ್ಕಣೆ ಮಾಡಿ ಫಸಲಿಗೆ ಪೂಜೆ ಮಾಡಿ ಮನೆಗೆ ತರುವ ಸಂಪ್ರದಾಯ ಕರ್ನಾಟದಲ್ಲಿ ಇತ್ತು. ಆದರೆ ಇದೀಗ ಕಣದಲ್ಲಿ ಒಕ್ಕಣೆ ಮಾಡುವ ಪದ್ದತಿ ಮರೆಯಾಗುತ್ತಿದ್ದು, ಬಹುಪಾಲು ರೈತರು ಡಾಂಬಾರು ರಸ್ತೆಯಲ್ಲಿ ಒಕ್ಕಣೆ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಕಣದಲ್ಲಿ ಒಕ್ಕಣೆ ಮಾಡುವ ಸಂಪ್ರದಾಯ ಮರೆಯಾಗುವುದರ ಜೊತೆಗೆ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೂ ಕಿರಿಕಿರಿ ಉಂಟಾಗುತ್ತಿದೆ.
ಹೌದು ಮಂಡ್ಯ ಜಿಲ್ಲೆ ಅಕ್ಷರಶಃ ಕೃಷಿ ಪ್ರಧಾನವಾದ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ರಾಗಿ, ಭತ್ತ, ಹುರುಳಿ ಸೇರಿದಂತೆ ಇತರ ಧಾನ್ಯ ಬೆಳೆಗಳನ್ನು ಬೆಳೆಯುತ್ತಾರೆ. ಸದ್ಯ ಈ ಎಲ್ಲಾ ಬೆಳೆಗಳನ್ನು ಒಕ್ಕಣೆ ಮಾಡುವ ಸುಗ್ಗಿ ಕಾಲ ಇದು. ಮೊದಲೆಲ್ಲಾ ಭತ್ತ, ರಾಗಿ, ಹುರುಳಿ ಸೇರಿದಂತೆ ಇತರೆ ಬೆಳೆಗಳನ್ನು ಕಣವನ್ನು ಸಿದ್ಧಪಡಿಸಿ ಅಲ್ಲಿ ಒಕ್ಕಣೆ ಮಾಡಿ, ಬಂದ ಫಸಲಿಗೆ ಪೂಜೆ ಮಾಡಿ ಮನೆಗೆ ಹಾಕಿಕೊಳ್ಳಲಾಗುತಿತ್ತು. ಆದರೆ ಇದೀಗ ಕಣದಲ್ಲಿ ಒಕ್ಕಣೆ ಮಾಡುವ ಪದ್ಧತಿ ಮಂಡ್ಯ ಜಿಲ್ಲೆಯಲ್ಲಿ ಕಾಲಕ್ರಮೇಣ ಮರೆಯಾಗುತ್ತಿದೆ.
Advertisement
Advertisement
ಕೆಲ ರೈತರು ಸದ್ಯ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಗದ್ದೆಯಲ್ಲೇ ಯಂತ್ರಗಳಿಂದ ಬೆಳೆಯನ್ನು ಕಟಾವುಗೊಳಿಸಿ ಅಲ್ಲೆ ಒಕ್ಕಣೆ ಮಾಡಿಸುತ್ತಿದ್ದಾರೆ. ಇದರಿಂದ ಸಮಯ ವ್ಯರ್ಥವಾಗುವುದಿಲ್ಲ ಮತ್ತು ಮ್ಯಾನ್ ಪವರ್ ಕೂಡ ಬೇಕಾಗುವುದಿಲ್ಲ. ಹೀಗಾಗಿ ಕೆಲ ರೈತರು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
Advertisement
ಇನ್ನೂ ಕೆಲ ರೈತರು ಆಧುನಿಕ ತಂತ್ರಜ್ಞಾನವನ್ನು ನಿರಾಕರಣೆ ಮಾಡಿ ತಾವೇ ಸ್ವತಃ ಕಟಾವು ಮಾಡಿ ಒಕ್ಕಣೆ ಮಾಡುತ್ತಾರೆ. ಹಿಂದೆ ಎಲ್ಲಾ ರೈತರು ತಮ್ಮ ಜಮೀನುಗಳಲ್ಲಿ ಭತ್ತ, ರಾಗಿ, ಹುರುಳಿ ಇತರೆ ಬೆಳೆಗಳನ್ನು ದನಗಳ ಸಹಾಯದಿಂದ ಹಾಗೂ ಕಲ್ಲಿನ ಸಹಾಯದಿಂದ ಒಕ್ಕಣೆ ಮಾಡುತ್ತಿದ್ದರು. ಆದರೆ ಇದೀಗ ಮಂಡ್ಯ ಭಾಗದಲ್ಲಿ ಕೆಲ ರೈತರು ಡಾಂಬಾರು ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದಾರೆ. ಇದರಿಂದ ಅಪಾರ ಪ್ರಮಾಣದಲ್ಲಿ ಫಸಲು ಹಾಗೂ ಹುಲ್ಲು ರಸ್ತೆ ಪಾಲಾಗುತ್ತಿದೆ.
Advertisement
ಡಾಂಬಾರು ರಸ್ತೆಯಲ್ಲಿ ರೈತರು ಒಕ್ಕಣೆ ಮಾಡುತ್ತಿರುವುದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಕೆಲ ದ್ವಿಚಕ್ರ ವಾಹನ ಸವಾರರು ಒಕ್ಕಣೆ ಮೇಲೆ ಹೋಗಿ ಬಿದ್ದು ಗಾಯಾಳುಗಳಾಗಿದ್ದಾರೆ. ಇನ್ನೂ ಕೆಲವರಿಗೆ ಒಕ್ಕಣೆಯ ಧೂಳು ಕಣ್ಣಿಗೆ ಬಿದ್ದು ಅಪಘಾತಗಳನ್ನು ಮಾಡಿಕೊಂಡಿದ್ದಾರೆ. ಕಾರುಗಳು ಒಕ್ಕಣೆಯ ಮೇಲೆ ಹೋದ ಸಂದರ್ಭದಲ್ಲಿ ಹುಲ್ಲು ಕಾರಿನ ಕೆಳ ಭಾಗದಲ್ಲಿ ಸೇರಿಕೊಳ್ಳುತ್ತದೆ. ಕಾರಿನ ಇಂಜಿನ್ ಬಿಸಿ ಆದ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಹಲವಾರು ಉದಾಹರಣೆಗಳು ಸಹ ಇವೆ.
ಈಗಲಾದರು ರೈತರು ಡಾಂಬಾರು ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ನಿಲ್ಲಿಸಿ ಕಣದಲ್ಲಿ ಒಕ್ಕಣೆ ಮಾಡಬೇಕಿದೆ. ಈ ಮೂಲಕ ವಾಹನ ಸವಾರರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವುದರ ಜೊತೆಗೆ ತಾವು ಬೆಳೆದ ಬೆಳೆಯನ್ನು ಸಹ ರಕ್ಷಣೆ ಮಾಡಿಕೊಳ್ಳಬಹುದು.