ಮಂಡ್ಯ: ನನ್ನ ಜಮೀನನ್ನು ವಶಪಡಿಸಿಕೊಂಡು ಸಾಲವನ್ನು ತೀರಿಸಿ ಎಂದು ರೈತರೊಬ್ಬರು ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಹಲವರಿಗೆ ಕಳೆದೊಂದು ವರ್ಷದಿಂದ ಮನವಿ ಮಾಡುತ್ತಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೋಳಾರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಬಿ. ಜವರೇಗೌಡ ಅವರಿಗೆ ಸುಮಾರು ಎರಡು ಎಕರೆ ಹತ್ತು ಗುಂಟೆ ಜಮೀನಿದೆ. ಇವರು ವ್ಯವಸಾಯದ ಜೊತೆಗೆ ತೃತೀಯ ದರ್ಜೆ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಉದ್ಯೋಗ ಖಾತರಿ ಯೋಜನೆಯಡಿ ಮಾಡಿಸಿದ ಕೆಲಸಕ್ಕೆ ಹಣ ಸಂದಾಯವಾಗಿಲ್ಲವಂತೆ. ಅಲ್ಲದೆ ಬರದಿಂದಾಗಿ ಕಳೆದ ಮೂರು ನಾಲ್ಕು ವರ್ಷದಿಂದ ಸರಿಯಾಗಿ ಬೆಳೆಯೂ ಕೈ ಸೇರಿಲ್ಲ. ಇವೆಲ್ಲದರ ನಡುವೆ ಸಾಲ ಮಾಡಿ ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದ್ದಾರೆ. ಇದರಿಂದಾಗಿ ಅಸಲು ಬಡ್ಡಿ ಎಲ್ಲ ಸೇರಿ ಸುಮಾರು 30 ಲಕ್ಷದಷ್ಟು ಸಾಲವಾಗಿದೆ.
ಇದನ್ನು ತೀರಿಸಲು ದಾರಿ ಕಾಣದ ರೈತ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಹಲವರಿಗೆ ಪತ್ರ ಬರೆದು ನನ್ನ ಜಮೀನನ್ನು ವಶಕ್ಕೆ ಪಡೆದು ಸಾಲ ತೀರಿಸಿ. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮನವಿ ಮಾಡಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಮನವಿ ಮಾಡುತ್ತಿದ್ದರೂ, ಯಾರೊಬ್ಬರೂ ಸಹಾಯಕ್ಕೆ ಬರುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.