ಮಂಡ್ಯ: ಅಧಿಕಾರಿಗಳು ಪರಿಹಾರ ನೀಡದ ಕಾರಣ ರೈತರೊಬ್ಬರು ವಿದ್ಯುತ್ ಕಂಬವನ್ನು ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಚಿಕ್ಕಸೋಮನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಚಿಕ್ಕಸೋಮನಹಳ್ಳಿ ಗ್ರಾಮದ ರೈತ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೇ ಗ್ರಾಮದ ಹೊರ ವಲಯದಲ್ಲಿ ಕುಮಾರ್ ಅವರ ಜಮೀನು ಇದ್ದು, ಆ ಜಮೀನಿನ ಮೇಲೆ 66/11 ಕೆವಿ ವಿದ್ಯುತ್ ಕಂಬ ಹೋಗಿದೆ. ಹೀಗಾಗಿ ಈ ಸ್ಥಳದಲ್ಲಿ ಬೆಳೆ ಬೆಳೆಯಲು ಕಷ್ಟವಾಗುತ್ತಿದೆ, ನನಗೆ ಬರಬೇಕಾದ ಪರಿಹಾರ ಹಣವನ್ನು ಕೊಡಿಸಿ ಎಂದು ಅಧಿಕಾರಿಗಳ ಬಳಿ ಕುಮಾರ್ ಕೇಳಿದ್ದರು. ಆದರೆ ಅಧಿಕಾರಿಗಳು ಮಾತ್ರ ರೈತನ ಮಾತಿಗೆ ಬೆಲೆ ನೀಡದೆ ಇದುವರೆಗೂ ಪರಿಹಾರ ನೀಡಲು ಕುಮಾರ್ ಅವರನ್ನು ಅಲೆಸಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೆ ಪೊಲೀಸ್ ಹೆಸರು ಹೇಳಿಕೊಂಡು ನಿನ್ನ ಮೇಲೆ ಎಫ್‍ಐಆರ್ ಆಗಿದೆ ಎಂದು ಕುಮಾರ್ ಅವರನ್ನು ಹೆದರಿಸಿದ್ದಾರೆ. ಪರಿಹಾರ ಕೊಡಲಿಸಲು ಆಗಲ್ಲ ಎಂದು ರೈತರಿಗೆ ಧಮ್ಕಿ ಹಾಕಿದ್ದಾರೆ. ಇದರಿಂದ ಮನನೊಂದ ರೈತ ತನ್ನ ಜಮೀನಿನಲ್ಲಿದ್ದ ವಿದ್ಯುತ್ ಕಂಬವನ್ನು ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಗ್ರಾಮಸ್ಥರು ಸ್ಥಳಕ್ಕೆ ಬಂದು ಕುಮಾರ್ ಅವರ ಮನವೊಲಿಸಿ ವಿದ್ಯುತ್ ಕಂಬದಿಂದ ಕೆಳಗಿಳಿಸಿದ್ದಾರೆ.