ಮಂಡ್ಯ: ಕೆಆರ್ ಪೇಟೆ ಬೈ ಎಲೆಕ್ಷನ್ ಬಳಿಕ ಸಕ್ಕರೆನಾಡಲ್ಲಿ ಬಿಜೆಪಿ ವರ್ಸಸ್ ಜೆಡಿಎಸ್ ನಡುವೆ ವಾರ್ ಶುರುವಾಗಿದೆ. ಸಚಿವ ನಾರಾಯಣಗೌಡ ವಿರುದ್ಧ ದಳಪತಿಗಳು ದ್ವೇಷ ರಾಜಕಾರಣದ ಆರೋಪ ಮಾಡುತ್ತಿದ್ದು, ಇಂದು ಸ್ವತಃ ದೇವೇಗೌಡರೇ ಫೀಲ್ಡಿಗಿಳಿದು ನಾರಾಯಣಗೌಡ ಹಾಗೂ ಅಧಿಕಾರಿಗಳ ವಿರುದ್ಧ ಗುಡಗಿದ್ದಾರೆ.
ಕೆಆರ್ ಪೇಟೆ ಬೈ ಎಲೆಕ್ಷನ್ ಬಳಿಕ ಕಾಂಗ್ರೆಸ್ ವರ್ಸಸ್ ಜೆಡಿಎಸ್ ಅಂತಿದ್ದ ಮಂಡ್ಯದಲ್ಲಿ ಬಿಜೆಪಿ ವರ್ಸಸ್ ಜೆಡಿಎಸ್ ಎಂಬ ವಾತಾವರಣ ನಿರ್ಮಾಣವಾಗಿದೆ. ಸಚಿವ ನಾರಾಯಣಗೌಡ ವಿರುದ್ಧ ಜೆಡಿಎಸ್ ನಾಯಕರು ದ್ವೇಷ ರಾಜಕಾರಣದ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಇಂದು ಫೀಲ್ಡಿಗಿಳಿದ ಮಾಜಿ ಪ್ರಧಾನಿ ದೇವೇಗೌಡರು ಕೆಆರ್ ಪೇಟೆ ಕಾರ್ಯಕರ್ತರ ಕುಂದು ಕೊರತೆ ಆಲಿಸಿ, ಸಚಿವ ನಾರಾಯಣಗೌಡ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
Advertisement
Advertisement
ಅಷ್ಟಕ್ಕೂ ದೇವೇಗೌಡರ ಅಸಮಾಧಾನಕ್ಕೆ ಕಾರಣ ಜೆಡಿಎಸ್ ಜಿ.ಪಂ ಸದಸ್ಯ ಎಚ್.ಟಿ ಮಂಜು ಮಾಲೀಕತ್ವದ ಕ್ರಷರ್ ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಕೆಆರ್ ಪೇಟೆ ತಾಲೂಕಿನ ಹರಳಹಳ್ಳಿ ಬಳಿಯ ಈ ಕ್ರಷರ್ ಗೆ ಕಾನೂನು ಪ್ರಕಾರ ಅನುಮತಿ ಇದ್ದರೂ ಅಧಿಕಾರಿಗಳು ನಾರಾಯಣಗೌಡರ ಮಾತು ಕೇಳಿ ಕ್ರಷರ್ ಮುಚ್ಚಿಸಿದ್ದಾರೆಂದು ಹೆಚ್‍ಡಿಡಿ ಅಸಮಾಧಾನ ಹೊರಹಾಕಿದ್ದಾರೆ.
Advertisement
ಜೆಡಿಎಸ್‍ನಲ್ಲಿದ್ದಾಗ ಕ್ರಷರ್ ನಡೆಸಲು ಅನುಮತಿ ಕೋರಿ ನಾರಾಯಣಗೌಡ ಬರೆದಿದ್ದ ಪತ್ರ ಹಾಗೂ ಬಿಜೆಪಿ ಸೇರಿ ಸಚಿವರಾದ ಮೇಲೆ ಕ್ರಷರ್ ಅನುಮತಿ ರದ್ದು ಪಡೆಸುವಂತೆ ಸಿಎಂಗೆ ಬರೆದಿರುವ ಪತ್ರ ಓದಿ ನಾರಾಯಣಗೌಡರ ಇಬ್ಬಗೆ ನೀತಿ ವಿವರಿಸಿದರು. ಜೊತೆಗೆ ಮಂಡ್ಯ ಡಿಸಿ ವೆಂಕಟೇಶ್ ಬಗ್ಗೆ ಕಿಡಿಕಾರಿದ ದೊಡ್ಡಗೌಡರು, ವೆಂಕಟೇಶ್ ಒಬ್ಬ ದಕ್ಷ ಅಧಿಕಾರಿ ಆದರೆ ಸಚಿವರ ಮಾತು ಕೇಳಿ ಹೀಗೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Advertisement
ನಾರಾಯಣಗೌಡರ ದ್ವೇಷ ರಾಜಕಾರಣ ವಿರುದ್ಧ ದೇವೇಗೌಡರು ಇಂದು ಪ್ರತಿಭಟನೆಗೆ ನಿರ್ಧರಿಸಿದರು. ಆದರೆ ಅದ್ಯಾಕೋ ಏನೋ ಕೊನೆ ಕ್ಷಣದಲ್ಲಿ ಪ್ರತಿಭಟನೆ ಕೈಬಿಟ್ಟ ದೊಡ್ಡಗೌಡರು, ಹರಳಹಳ್ಳಿ ಬಳಿಯ ಟಿಜೆ ಕ್ರಷರ್ ಗೆ ಭೇಟಿ ಕೊಟ್ಟು ಕೇವಲ ವೀಕ್ಷಣೆ ನಡೆಸಿದರು. ಬಳಿಕ ಕ್ರಷರ್ ಬಳಿ ಸೇರಿದ್ದ ಕಾರ್ಯಕರ್ತರ ಕುಂದು ಕೊರತೆ ಆಲಿಸಿ, ನಮ್ಮ ಪಕ್ಷದವರಿಗೆ ತೊಂದರೆ ಕೊಟ್ಟರೆ ಹೋರಾಟ ಶತಸಿದ್ಧ ಎಂದು ಎಚ್ಚರಿಸಿ, ಕಾರ್ಯಕರ್ತರಿಗೆ ಧೈರ್ಯ ತುಂಬಿದರು.