ಮಂಡ್ಯ: ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವರ್ಸಸ್ ಸರ್ಕಾರದ ನಡುವಿನ ಸಮರದಲ್ಲಿ ಸುಮಲತಾ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ. ಆ ಮೂಲಕ ಸುಮಲತಾ ಅವರು ಬರೋಬ್ಬರಿ 1,26,436 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.
ವಿಧಾನಸಭಾವಾರು ಮತ ಪ್ರಮಾಣ:
ಮಂಡ್ಯದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ? ಎಷ್ಟು? ಮತಗಳು ಲಭಿಸಿದೆ ಎಂಬುವುದನ್ನು ನೋಡುವುದಾದರೆ, ಮಂಡ್ಯದಲ್ಲಿ ನಿಖಿಲ್ ಅವರಿಗೆ 67,259 ಮತ ಹಾಗೂ ಸುಮಲತಾ ಅವರಿಗೆ 89,266 ಮತ ಲಭಿಸಿದೆ. ಸ್ವತಃ ಕುಮಾರಸ್ವಾಮಿ ಅವರ ಚನ್ನಪಟ್ಟಣದಲ್ಲಿ ಸುಮಲತಾ ಅವರಿಗೆ 22,007 ಲೀಡ್ ಸಿಕ್ಕಿದೆ.
Advertisement
Advertisement
ಮದ್ದೂರು ಶಾಸಕ ಡಿಸಿ ತಮ್ಮಣ್ಣ ಅವರ ಕ್ಷೇತ್ರದಲ್ಲಿ ನಿಖಿಲ್‍ಗೆ 71,364 ಮತ, ಸುಮಲತಾಗೆ 90,331 ಸಿಕ್ಕಿದ್ದು, 18,967 ಮತಗಳ ಮುನ್ನಡೆಯನ್ನ ಸುಮಲತಾ ಪಡೆದಿದ್ದಾರೆ. ಮೇಲುಕೋಟೆಯಲ್ಲಿ ನಿಖಿಲ್‍ಗೆ 71,998 ಮತ, ಸುಮಲತಾಗೆ 87,884 ಮತ ಗಳಿಸಿದ್ದರೆ 15,886 ಮತಗಳ ಮುನ್ನಡೆಯನ್ನ ಸುಮಲತಾ ಪಡೆದಿದ್ದಾರೆ. ಶಾಸಕ ಪಿಎಂ ನರೇಂದ್ರ ಸ್ವಾಮಿ ಅವರ ಮಳವಳ್ಳಿಯಲ್ಲಿ ನಿಖಿಲ್‍ಗೆ 68,749 ಮತ ಹಾಗೂ ಸುಮಲತಾ ಅವರಿಗೆ 10,0320 ಲಭಿಸುವುದರೊಂದಿಗೆ 31,571 ಮತಗಳ ಬಹುದೊಡ್ಡ ಲೀಡ್ ಸಿಕ್ಕಿದೆ.
Advertisement
ಕೆಆರ್ ಪೇಟೆ ಶಾಸಕರಾದ ನಾರಾಯಣಗೌಡ ಕ್ಷೇತ್ರದಲ್ಲಿ ನಿಖಿಲ್‍ಗೆ 75,528 ಮತ ಹಾಗೂ ಸುಮಲತಾಗೆ 79,295 ಮತ ಲಭಿಸಿದ್ದು, ಸುಮಲತಾ 3,767 ಮತಗಳ ಮುನ್ನಡೆಯನ್ನ ಪಡೆದಿದ್ದಾರೆ. ನಾಗಮಂಗಲ ಶಾಸಕ ಸುರೇಶ್ ಗೌಡ ಅವರ ಕ್ಷೇತ್ರದಲ್ಲಿ ನಿಖಿಲ್‍ಗೆ 83,092 ಮತ, ಸುಮಲತಾಗೆ 76,134 ಮತ ಸಿಕ್ಕಿದ್ದು, ಈ ಕ್ಷೇತ್ರದಲ್ಲಿ ನಿಕಿಲ್ 6,958 ಮತಗಳ ಮುನ್ನಡೆ ಪಡೆದಿದ್ದರು.
Advertisement
ಸಚಿವ ಸಾರಾ ಮಹೇಶ್ ಅವರ ಕ್ಷೇತ್ರವಾದ ಕೆ ಆರ್ ನಗರದಲ್ಲಿ ನಿಲಿಲ್‍ಗೆ 282 ಮತ ಮುನ್ನಡೆ ಸಿಕ್ಕಿದ್ದು, ಸುಮಲತಾ 74,969 ಮತ ಪಡೆದಿದ್ದರೆ, ನಿಖಿಲ್ 75,251 ಮತ ಗಳಿಸಿದ್ದಾರೆ. ಉಳಿದಂತೆ ಶಾಸಕ ರವೀಂದ್ರ ಶೀಕಂಠಯ್ಯ ಅವರ ಶ್ರೀರಂಗಪಟ್ಟಣದಲ್ಲಿ ನಿಖಿಲ್‍ಗೆ 67,363 ಮತ, ಸುಮಲತಾಗೆ 95,142 ಮತ ಸಿಕ್ಕಿದ್ದು, 27,779 ಮತಗಳ ಮುನ್ನಡೆಯನ್ನು ಸುಮಲತಾ ಪಡೆದಿದ್ದಾರೆ.
ನಿಖಿಲ್ ಸೋಲಿಗೆ ಕಾರಣಗಳೇನು?
ಮಂಡ್ಯದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಶಾಸಕರೇ ಇದ್ದರು ಕೂಡ ನಿಖಿಲ್ ಸೋಲು ಪಕ್ಷಕ್ಕೆ ತೀವ್ರ ಮುಖಭಂಗಕ್ಕೆ ಕಾರಣವಾಗಿದೆ. ಮೈತ್ರಿ ಪಕ್ಷ ಕಾಂಗ್ರೆಸ್ ಜೊತೆ ಚರ್ಚಿಸದೆ ಅಭ್ಯರ್ಥಿಯಾಗಿ ಘೋಷಿಸಿದ್ದು ನಿಖಿಲ್‍ಗೆ ಮೊದಲ ಹಿನ್ನಡೆಗೆ ಕಾರಣವಾಯಿತು. ಪರಿಣಾಮ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಪರಿಗಣನೆಗೆ ತೆಗೆದುಕೊಳ್ಳದೇ ಚುನಾವಣೆ ಎದುರಿಸಿದ್ದರು. ಇದು ಕೂಡ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿ ಸುಮಲತಾಗೆ ಬೆಂಬಲ ನೀಡಿದರು.
ಚುನಾವಣಾ ಪ್ರಚಾರದ ವೇಳೆಯೂ ಜೆಡಿಎಸ್ ಮುಖಂಡರು ಸುಮಲತಾರನ್ನ ಟಾರ್ಗೆಟ್ ಮಾಡಿ, ಗೌಡತಿ ಅಲ್ಲ, ಮಾಯಾಂಗನೆ ಎಂದು ಟೀಕೆ ಮಾಡಿದ್ದರು. ಅಲ್ಲದೇ ಸಿಎಂ ಕುಮಾರಸ್ವಾಮಿ ಅವರೇ ಯಶ್, ದರ್ಶನ್‍ರನ್ನು ಕಳ್ಳೆತ್ತು ಎಂದು ಕರೆದಿದ್ದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು. ಸಚಿವ ರೇವಣ್ಣ ಅವರು ಕೂಡ ಟೀಕೆ ಮಾಡಿ, ಗಂಡ ಸತ್ತ ಐದೇ ತಿಂಗಳಿಗೆ ರಾಜಕೀಯ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದರು. ಈ ಎಲ್ಲಾ ಹೇಳಿಕೆಗಳು ಜೆಡಿಎಸ್‍ಗೆ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದೆ.
ಸುಮಲತಾ ಗೆಲುವಿಗೆ ಕಾರಣಗಳೇನು?
ಚುನಾವಣಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ನಿರ್ಣಯ ಮಾಡುವುದರಿಂದ ಪ್ರಚಾರದ ಅಂತಿಮ ಕ್ಷಣದವರೆಗೂ ಸುಮಲತಾ ಅವರು ತಾಳ್ಮೆಯಿಂದಲೇ ನಡೆದಿದ್ದರು. ಮಂಡ್ಯ ಜನರ ಬಳಿಕ ಸ್ವಾಭಿಮಾನ ಅಸ್ತ್ರ ಬಳಸಿ ಜನರ ಅಸ್ಮಿತೆ ಎಚ್ಚರಿಸಿದ್ದರು. ಪ್ರಮುಖವಾಗಿ ಪ್ರಚಾರದ ಕೊನೇ ದಿನ ಜೋಳಿಗೆ ಹಿಡಿದು, ಕಂಬನಿ ಸುರಿಸಿ ಮತಯಾಚಿಸಿದ್ದರು. ಜೆಡಿಎಸ್ ನಾಯಕರ ಕಟು ಟೀಕೆಗಳಿಗೆ ಮೌನವಾಗಿಯೇ ಪ್ರತಿಕ್ರಿಯೆ ನೀಡಿದ್ದ ಅವರು, ಜನರ ಮನ ಗೆಲ್ಲಲು ಯಶಸ್ವಿಯಾಗಿದ್ದರು. ಚುನಾವಣಾ ಸ್ಪರ್ಧೆಯ ಸಮಯದಿಂದ ಪ್ರಚಾರದ ಉದಕ್ಕೂ ನಟರಾದ ಯಶ್ ಹಾಗೂ ದರ್ಶನ್ ಅವರು ಅಬ್ಬರದ ನಡೆಸಿದ್ದರು. ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ನಿಲ್ಲಿಸದೇ ಮೈಸೂರು ಪ್ರಚಾರ ಭಾಷಣದಲ್ಲಿ ಮೋದಿ ಸುಮಲತಾಗೆ ನೀವು ಆಶೀರ್ವಾದ ಮಾಡಿ ಗೆಲ್ಲಿಸಬೇಕೆಂದು ಹೇಳಿದ್ದು ನೆರವಾಗಿದೆ. ಇತ್ತ ಕಾಂಗ್ರೆಸ್ ಅತೃಪ್ತರ ನಾಯಕರು ಕೆಲ ಮಂದಿ ಬಹಿರಂಗ ಬೆಂಬಲ ನೀಡಿದರೆ ಮತ್ತು ಕೆಲವರು ಒಳಗೊಳಗೆ ಬೆಂಬಲಕ್ಕೆ ನಿಂತು ಸುಮಲತಾರ ಗೆಲುವಿಗೆ ಕಾರಣರಾಗಿದ್ದಾರೆ.