ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿಚಾರದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರ ತಲೆದಂಡವಾಗಿದೆ. ಮಂಜುಶ್ರೀ ಅವರನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಪಿ.ಸಿ ಜಾಫರ್ ನೇಮಕವಾಗಿದ್ದಾರೆ.
ಮಂಡ್ಯ ಡಿಸಿಯಾಗಿದ್ದ ಮಂಜುಶ್ರೀ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆಯಲ್ಲಿ ವೇಳೆ ವಿಡಿಯೋ ದೃಶ್ಯ ನೀಡಿಲ್ಲ. ಅಷ್ಟೇ ಅಲ್ಲದೇ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಮಲತಾ ಅವರು ಆಯೋಗಕ್ಕೆ ದೂರು ನೀಡಿದ್ದರು.
Advertisement
Advertisement
ಸುಮಲತಾ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗ ಡಿಸಿ ಮಂಜುಶ್ರೀ ಅವರನ್ನು ವರ್ಗಾವಣೆ ಮಾಡಿ ಬಿಸಿ ಮುಟ್ಟಿಸಿದೆ.
Advertisement
ಸುಮಲತಾ ಆರೋಪ ಏನಿತ್ತು?
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಸಲ್ಲಿಸಿದ ಫಾರ್ಮ್ ನಂಬರ್ 26ನಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲ. ಚರಾಸ್ತಿ ಹಾಗೂ ಸ್ಥಿರಾಸ್ತಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಸುಮಲತಾ ಅವರ ಚುನಾವಣಾ ಏಜೆಂಟ್ ಮದನ್ ಕುಮಾರ್ ಮನವಿ ಮಾಡಿದ್ದರು.
Advertisement
ನಮ್ಮ ಮನವಿ ಸಲ್ಲಿಸಿದಾಗ ಆಕ್ಷೇಪಣಾ ಅರ್ಜಿ ಸಲ್ಲಿಸಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರು. ಇದರಿಂದಾಗಿ ನಾಮಪತ್ರ ಪರಿಶೀಲನೆಯ ದೃಶ್ಯವನ್ನು ಸೆರೆ ಹಿಡಿದ ದೃಶ್ಯವನ್ನು ನೀಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿ, ವಿಡಿಯೋ ಕ್ಯಾಮೆರಾಮನ್ ಯಾವುದೋ ಮದುವೆ ಕಾರ್ಯಕ್ಕೆ ಕಳಿಸಿದ್ದೇವೆ. ಹೀಗಾಗಿ ವಿಡಿಯೋ ಫುಟೇಜ್ ನೀಡಲು ಎರಡ್ಮೂರು ದಿನ ಸಮಯ ಬೇಕಾಗುತ್ತದೆ ಅಂತ ಹೇಳಿದ್ದರು. ಆದರೆ ಮರುದಿನವೇ ನಮಗೆ ಅರ್ಧ ವಿಡಿಯೋ ಮಾತ್ರ ಕೊಟ್ಟರು. ಅದರಲ್ಲಿ ನಾನು ಆಕ್ಷೇಪ ವ್ಯಕ್ತಪಡಿಸಿದ ದೃಶ್ಯವನ್ನೇ ಕತ್ತರಿಸಲಾಗಿತ್ತು. ಇದರಿಂದಾಗಿ ಸಂಪೂರ್ಣ ವಿಡಿಯೋ ನೀಡುವಂತೆ ಕೇಳಿದಾಗ, ವಿಡಿಯೋಗ್ರಾಫರ್ ಟ್ಯಾಂಪರ್ ಮಾಡಿದ್ದಾನೆ ಎಂಬ ಸಂಶಯ ಬರುತ್ತಿದೆ. ಈ ಸಂಬಂಧ ಆತನ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು ಎಂದು ಮದನ್ ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು. ಈ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಿ ಸುಮಲತಾ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.