– ಹೆಚ್‍ಡಿಕೆಗೆ ಟೋಪಿ ಹಾಕೋದು ಹೇಳಿಕೊಟ್ಟಿದ್ದು ಚಲುವರಾಯಸ್ವಾಮಿ
ಮಂಡ್ಯ: ಈಗ ಒಬ್ಬರಿಗೊಬ್ಬರ ಮೇಲೆ ಕೆಸರೆರೆಚಿಕೊಂಡರೆ ಮೈತ್ರಿ ಸರ್ಕಾರ ವಾಪಸ್ ಬರುತ್ತಾ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪ್ರಶ್ನಿಸಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೈತ್ರಿ ಮುಂದುವರಿಯುವುದರ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ತೀರ್ಮಾನ ಮಾಡುತ್ತಾರೆ. ಈಗ ಸಮ್ಮಿಶ್ರ ಸರ್ಕಾರ ಮುಗಿದು ಹೋದ ಕಥೆಯಾಗಿದೆ. ಈ ಒಬ್ಬರಿಗೊಬ್ಬರ ಮೇಲೆ ಕೆಸರೆರೆಚಿಕೊಂಡರೆ ಸಮ್ಮಿಶ್ರ ಸರ್ಕಾರ ವಾಪಸ್ ಬರುತ್ತಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಬಗ್ಗೆ ದೇವೇಗೌಡರು ಹೇಳಿಕೆ ವಿಚಾರವಾಗಿ ಮಾತನಾಡಿದ ಪುಟ್ಟರಾಜು, ಎಂಪಿ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯನ ಕೆಲ ಪಕ್ಕಾ ಬೆಂಬಲಿಗರೇ ನಿಖಿಲ್ ಸೋಲುತ್ತಾರೆ ಎಂದು ಮಾತನಾಡಿದ್ದರು. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ವಿಚಾರಕ್ಕೆ ಮನನೊಂದ ಹೆಚ್‍ಡಿಡಿ ಈ ರೀತಿ ಹೇಳಿದ್ದಾರೆ. ಈಗ ಅದರ ಬಗ್ಗೆ ಮಾತನಾಡುವುದು ಬೇಡ. ನಮಗೆ ವಹಿಸಿದ ಜವಾಬ್ದಾರಿಯನ್ನು ಮಾತ್ರ ನಾವು ಮಾಡುತ್ತೇವೆ ಎಂದು ತಿಳಿಸಿದರು.
ಹಳೆ ಮೈಸೂರು ಪ್ರಾಂತ್ಯದಲ್ಲಿ ಮೊದಲಿನಿಂದಲೂ ನಮಗೆ ಮತ್ತು ಕಾಂಗ್ರೆಸ್‍ಗೆ ಫೈಟ್ ಇತ್ತು. ನಾವು ಶತ್ರುಗಳಾಗಿಯೇ ಹೊಡೆದಾಡಿಕೊಂಡು ಬಂದವರು. ಈಗ ಒಂದಾಗಿ ಕೆಲಸ ಮಾಡುವ ವೇಳೆ ಈ ರೀತಿಯ ಬೆಳವಣಿಗೆ ಸಹಜ. ಇದನ್ನು ಸರಿಪಡಿಸುವ ಕೆಲಸವನ್ನು ನಮ್ಮ ನಾಯಕರು ಮಾಡುತ್ತಾರೆ. ಈ ಬಗ್ಗೆ ನಮ್ಮ ನಾಯಕರ ಬಳಿ ಹೇಳಿದ್ದೇನೆ, ಬೇಡ ಎಂದರೆ ಬಿಟ್ಟಾಕಿ. ಆದರ ಬದಲು ಹೀಗೆ ಕಿತ್ತಾಡೋದು ಬೇಡಾ ಎಂದು ಹೇಳಿದ್ದೇನೆ ಎಂದು ಹೇಳಿದರು.
ಈ ವೇಳೆ ಮಾಜಿ ಶಾಸಕ ಚಲುವರಾಯಸ್ವಾಮಿ ಬಗ್ಗೆ ಮಾತನಾಡಿದ ಅವರು, ಚಲುವರಾಯಸ್ವಾಮಿ ಯಾರ ಬೆನ್ನ ಹಿಂದೆ ನಿಂತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಯಡಿಯೂರಪ್ಪ ಅವರ ಬೆನ್ನ ಹಿಂದೆಯೋ ಸಿದ್ದರಾಮಯ್ಯ ಅವರ ಬೆನ್ನ ಹಿಂದೆಯೋ ಎಂದು ಅರ್ಥ ಆಗುತ್ತಿಲ್ಲ. ಹೆಚ್‍ಡಿಕೆಗೆ ಟೋಪಿ ಹಾಕೋದು ಹೇಳಿಕೊಟ್ಟಿದ್ದೇ ಚಲುವರಾಯಸ್ವಾಮಿ. ಇದರ ಬಗ್ಗೆ ನಾನು ಆಮೇಲೆ ಮಾತಾಡುತ್ತೇನೆ ಎಂದು ಕಿಡಿಕಾರಿದರು.