ಮಂಡ್ಯ: ಸಿಎಂ ಗ್ರಾಮ ವಾಸ್ತವ್ಯದಿಂದ ಊರು ಅಭಿವೃದ್ಧಿಯಾಯ್ತು ಆದರೆ ಬಡ ಮನೆ ಮಾಲೀಕ ಮಾತ್ರ ಸಾಲಗಾರನಾಗಿದ್ದಾನೆ.
2006ರ ನವೆಂಬರ್ ನಲ್ಲಿ ಕೆ.ಆರ್.ಪೇಟೆ ತಾಲೂಕಿನ ನವಿಲುಮಾರನಹಳ್ಳಿಯ ಮಾಯಿಗೌಡ ಮನೆಯಲ್ಲಿ ಸಿಎಂ ಅವರು ವಾಸ್ತವ್ಯ ಹೂಡಿದ್ದರು. ಸಿಎಂ ವಾಸ್ತವ್ಯದ ಹಿನ್ನೆಲೆಯಲ್ಲಿ ಮನೆ ದುರಸ್ತಿ, ಮನೆ ಮುಂದಿನ ಗುಂಡಿ ಮುಚ್ಚಿಸುವಂತೆ ಅಧಿಕಾರಿಗಳು ಸೂಚಿಸಿದ್ದರು.
ಈಗ ನೀವೇ ಹಣ ಹಾಕಿ ಮನೆ ದುರಸ್ತಿ ಮಾಡಿಸಿ, ಮನೆ ಮುಂದಿನ ಗುಂಡಿ ಮುಚ್ಚಿಸಿ ಹಾಗೂ ಗ್ರಾಮದಲ್ಲಿ ಅಶ್ವಥ ಕಟ್ಟೆ ನಿರ್ಮಿಸಬೇಕು. ಗ್ರಾಮ ವಾಸ್ತವ್ಯದ ಬಳಿಕ ಹಣ ನೀಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಅಧಿಕಾರಿಗಳ ಭರವಸೆಯಂತೆ ಮಾಯಿಗೌಡ ಅವರು 1.20 ಲಕ್ಷ ರೂ. ಸಾಲ ಮಾಡಿ ಕಾಮಗಾರಿ ಮುಗಿಸಿದ್ದರು. ಸಿಎಂ ವಾಸ್ತವ್ಯ ಮಾಡಿ ಹೋದ ಬಳಿಕ ಅಧಿಕಾರಿಗಳು ಬಿಲ್ ಪಾವತಿಸಿಲ್ಲ.
ಈ ಬಗ್ಗೆ ಸಚಿವ ಸಿ.ಎಸ್.ಪುಟ್ಟರಾಜು ಬಳಿಯೂ ಹಲವು ಬಾರಿ ನಾನು ಮನವಿ ಮಾಡಿದ್ದೆ. ಅಲ್ಲದೆ ಸಿಎಂ ಅವರಿಗೆ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ ಎಂದು ಮನೆ ಮಾಲೀಕ ಮಾಯಿಗೌಡ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಾಡಿದ ಸಾಲ ತೀರಿಸಲು ಹಲವಾರು ವರ್ಷಗಳಿಂದ ಹೆಣಗಾಡಿದ ಮಾಯಿಗೌಡ, ಸಾಲದ ಒತ್ತಡ ಜಾಸ್ತಿಯಾಗಿದ್ದರಿಂದ ತನ್ನ ಜಮೀನಿನಲ್ಲಿದ್ದ ಮರಗಳನ್ನು ಮಾರಿ ಸಾಲ ತೀರಿಸಿದ್ದಾರೆ. ಸಿಎಂ ಗ್ರಾಮ ವಾಸ್ತವ್ಯದಿಂದ ಊರು ಅಭಿವೃದ್ಧಿ ಕಂಡಿದೆ. ಆದರೆ ನಮ್ಮ ಮನೆಯಲ್ಲಿ ಸಿಎಂ ಉಳಿದುಕೊಂಡಿದ್ದಕ್ಕೆ ನಾನು ಸಾಲ ಮಾಡಿಕೊಳ್ಳಬೇಕಾಯ್ತು. ಇದರಲ್ಲಿ ಸಿಎಂ ಅವರ ತಪ್ಪಿಲ್ಲ. ಅಧಿಕಾರಿಗಳು ಹಣ ನೀಡಲಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಸಿಎಂ ಎಚ್ಚರ ವಹಿಸಲಿ ಎಂದು ಮಾಯಿಗೌಡ ಸಲಹೆ ನೀಡಿದ್ದಾರೆ.