ಮಂಡ್ಯ: ಕೊರೋನಾ ವೈರಸ್ ಹಿನ್ನೆಲೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲೂ ಸಹ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಡ್ಯ ಮೂಲದ ಯುವತಿ ತವರಿಗೆ ಬಂದಿದ್ದು, ಜಿಲ್ಲೆಯಾದ್ಯಂತ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕಳೆದ ಐದು ದಿನದ ಹಿಂದೆ ಚೀನಾದಿಂದ ಬಂದಿರುವ ಯುವತಿಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಯುವತಿಯ ರಕ್ತ ಕಣದಲ್ಲಿ ಕೊರೋನಾ ವೈರಸ್ ಬಂದಿರುವ ಯಾವುದೇ ಲಕ್ಷಣಗಳು ಗೋಚರವಾಗಿಲ್ಲ. ಈ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.
ಜೊತೆಗೆ ಯುವತಿಗೆ ಮನೆಯಿಂದ 15 ದಿನಗಳ ಕಾಲ ಹೊರಗಡೆ ಬಾರದಂತೆ ವೈದ್ಯರು ಸೂಚನೆ ನೀಡಿದ್ದಾರೆ. ಚೀನಾದಲ್ಲಿ ಕೊರೋನಾ ವೈರಸ್ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐದು ದಿನಗಳ ಹಿಂದೆ ವಿದ್ಯಾರ್ಥಿನಿ ಮಂಡ್ಯಕ್ಕೆ ಮರಳಿದ್ದಾಳೆ.
ಕೊರೋನಾ ವೈರಸ್ ಹಿನ್ನೆಲೆ ಮಂಡ್ಯ ಜಿಲ್ಲೆಯಾದ್ಯಾಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಫುಲ್ ಅಲರ್ಟ್ ಆಗಿದೆ. ಈಗಾಗಲೇ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಒಂದು ವಾರ್ಡ್ ತೆರದು ಅಲ್ಲಿ ಐದು ಹಾಸಿಗೆಗಳನ್ನು ಸಹ ಮೀಸಲಿಡಲಾಗಿದೆ. ಅಲ್ಲದೇ ಜನರಲ್ಲಿ ಈ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಬಿ. ಮಂಜೇಗೌಡ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.