– ದೇವೇಗೌಡ್ರ ಕುಟುಂಬಕ್ಕೂ ಡಿಕೆಶಿಗೂ ವೈಮನಸ್ಸಿತ್ತು
ಮಂಡ್ಯ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದರೋಡೆ ಮಾಡುವುದಕ್ಕೆ ನಾವು ಹೇಳಿದ್ವಾ, ಇದಕ್ಕೆಲ್ಲ ನಾನು ಹೊಣೆಯೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ ಎನ್ನುವ ಮೂಲಕ ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಎಲ್ಲರೂ ತಮ್ಮ ಮೊಬೈಲ್ ಸ್ವಿಚ್ಛ್ ಆಫ್ ಮಾಡಿದ್ದರು. ಒಕ್ಕಲಿಗ ಸಮಾಜದ ನಾಯಕರು, ಯುವಕರು ಹಾಗೂ ನಾನು ಆ ಸಭೆಗೆ ಹೋಗಿಲ್ಲ ಎಂದು ನನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ದೂಷಣೆ ಮಾಡುತ್ತಿದ್ದಾರೆ. ಇಂತಹ ದರೋಡೆ ಮಾಡಲು ನಾವು ಹೇಳಿದ್ವಾ. ದರೋಡೆ ಮಾಡಿ ಸಾರ್ವಜನಿಕರಿಗೆ ಹಂಚುತ್ತಾರಾ. ಇದಕ್ಕೆ ನಾನು ಹೊಣೆನಾ..? ನಾನು ಸಭೆಗೆ ಯಾಕೆ ಹೋಗಬೇಕಿತ್ತು..? ಎಂದೆಲ್ಲ ಹೆಚ್‍ಡಿಕೆ ಅವರು ಮಾತನಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಇದು ಎಷ್ಟು ಸತ್ಯ, ಸುಳ್ಳು ಎಂದು ನನಗೆ ಗೊತ್ತಿಲ್ಲ. ಹೀಗಾಗಿ ಸತ್ಯ ಗೊತ್ತಿಲ್ಲದೇ ನಾನು ಮಾತನಾಡುವುದು ತಪ್ಪು ಎಂದು ಗಂಭೀರ ಆರೋಪ ಮಾಡಿ ಯಾರೋ ಹೇಳುತ್ತಿದ್ದಾರೆಂದು ಹೇಳಿ ಚಲುವರಾಯಸ್ವಾಮಿ ಜಾರಿಕೊಂಡಿದ್ದಾರೆ.
Advertisement
Advertisement
ಹೆಚ್‍ಡಿಕೆ ಅವರು ಸಿಎಂ ಪಟ್ಟ ಉಳಿಸಲು ಎಲ್ಲರನ್ನೂ ಎದುರಾಕಿಕೊಂಡರು. ಇಂದು ಡಿಕೆಶಿ ಜೊತೆಯಲ್ಲಿ ಕುಮಾರಸ್ವಾಮಿ ನಿಲ್ಲಲಿಲ್ಲ. ಕುಮಾರಸ್ವಾಮಿ ಅವರಿಗೆ ಇಂತಹ ಕಷ್ಟ ಬಂದಿದ್ದರೆ ಡಿಕೆಶಿ ಸ್ಟೇಷನ್ ಹತ್ತಿರನೇ ಕೂರುತ್ತಿದ್ದರು. ಆದರೆ ಡಿಕೆಶಿಗೆ ಮಾನಸಿಕವಾಗಿ ಧೈರ್ಯ ತುಂಬ ಬಹುದಿತ್ತು. ಒಕ್ಕಲಿಗ ಸಂಘಟನೆಗಳಿಂದ ನಡೆದ ಹೋರಾಟಕ್ಕೂ ಸಪೋರ್ಟ್ ಮಾಡಲಿಲ್ಲ. ಅದನ್ನು ಬಿಟ್ಟು ಅಂದು ಚನ್ನಪಟ್ಟಣದಲ್ಲಿ ಕಾರ್ಯಕ್ರಮವನ್ನು ಹಾಕಿಕೊಂಡರು. ಉದ್ದೇಶ ಪೂರ್ವಕವಾಗಿ ಚನ್ನಪಟ್ಟಣಕ್ಕೆ ಹೋಗಿದ್ರಾ ಅಥವಾ ಹೋರಾಟಕ್ಕೆ ಹೋಗುವ ಜನರನ್ನು ಅವೈಡ್ ಮಾಡೋದಕ್ಕೆ ಹೋಗಿದ್ರಾ ಎಂದು ಡಿಕೆಶಿ ಪರ ಒಕ್ಕಲಿಗ ಸಮುದಾಯದ ಹೋರಾಟಕ್ಕೆ ಗೈರಾದ ಹೆಚ್‍ಡಿಕೆಗೆ ಮಾಜಿ ಸಚಿವರು ಪ್ರಶ್ನೆ ಮಾಡಿದರು.
Advertisement
ಡಿ.ಕೆ.ಶಿವಕುಮಾರ್ ಮಾಡಬಾರದ ಕ್ರೈಮ್ ಮಾಡಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆಗೆ ಮಾಡಿಕೊಳ್ಳಲು ಡಿಕೆಶಿ ಬಿಡಲಿಲ್ಲ. ಕಾಂಗ್ರೆಸ್ ರಕ್ಷಣೆ ಮಾಡಿಕೊಳ್ಳಲು ನಿಂತಿದ್ದರು. ಈ ಸಿಟ್ಟು ಡಿಕೆಶಿ ಬಿಜೆಪಿ ನಾಯಕರಿಗೆ ಇತ್ತು. ಹಿಂದೆ ದೇವೇಗೌಡರ ಕುಟುಂಬಕ್ಕೂ ಡಿಕೆಶಿಗೂ ವೈಮನಸ್ಸಿತ್ತು. ಹೀಗೆ ಇಲ್ಲದೆಲ್ಲ ಚರ್ಚೆ ನಡೆಯುತ್ತಿದೆ. ಒಂದಲ್ಲೊಂದು ದಿನ ಸತ್ಯ ಹೊರಗಡೆ ಬರುತ್ತದೆ. ಜಾಣ್ಮೆಯಿಂದಲೇ, ಪರೋಕ್ಷವಾಗಿ ಡಿಕೆಶಿ ಬಂಧನಕ್ಕೆ ದೇವೇಗೌಡರ ಕುಟುಂಬ ಕಾರಣ ಎಂದು ಚಲುವರಾಯಸ್ವಾಮಿ ಆರೋಪ ಮಾಡಿದರು.
Advertisement
ದೇವೇಗೌಡರು ಹೇಳೋದೆಲ್ಲ ಸುಳ್ಳು. ಅವರಿಂದ ಅನೇಕರಿಗೆ ನೋವಾಗಿದೆ. ಜನರಿಗೆ ಮನವರಿಕೆ ಆಗುವವರೆಗೂ ಇದು ನಡೆಯುತ್ತಲೇ ಇರುತ್ತದೆ. ಜನರಿಗೆ ಅರ್ಥವಾದಾಗ ಎಲ್ಲವೂ ಸರಿಹೋಗುತ್ತದೆ. ಆ ದಿನ ಬೇಗ ಬರುತ್ತದೆ. ಜಿ.ಟಿ ದೇವೇಗೌಡರು ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಶ್ರೀನಿವಾಸ್ ಕೂಡ ಸಿಡಿದೆದ್ದು ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಜೆಡಿಎಸ್ ವರಿಷ್ಠರಿಗೆ ಯಾರೇ ಹೋದರೂ, ಬಂದ್ರೂ ತೆಲೆಕೆಡಿಸಿಕೊಳ್ಳಲ್ಲ. ಈ ಭಾಗದ ಜನ ತಮ್ಮನ್ನು ನಂಬುತ್ತಾರೆ, ಯಾವುದೇ ಸರ್ಕಾರಗಳಲ್ಲಿ ಕಿಂಗ್ ಮೇಕರ್ ಆಗುತ್ತೇವೆ ಅಂದುಕೊಂಡಿದ್ದಾರೆ. ಅಂತಿಮವಾಗಿ ಮತದಾರರೇ ತೀರ್ಮಾನ ಮಾಡಬೇಕು ಎಂದರು.
ಒಕ್ಕಲಿಗರು ಬೆಳೆಯಲು ದೇವೇಗೌಡರು ಬಿಡಲ್ಲ ಎಂಬ ನಾರಾಯಣಗೌಡ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಬಹಳಷ್ಟು ಒಕ್ಕಲಿಗರು ಪರಿಸ್ಥಿತಿ ಎದುರಿಸಿದ್ದಾರೆ. ಮಾಜಿ ಮಂತ್ರಿಯಾಗಿ ಸ್ವಲ್ಪ ಗುರುತಿಸಿಕೊಂಡವರು ಜೆಡಿಎಸ್ ನಲ್ಲಿ ಉಳಿದಿಲ್ಲ. ಜೆಡಿಎಸ್ ಅನ್ನು ಸಾರ್ವತ್ರಿಕ ಪಕ್ಷವಾಗಿ, ರಾಜಕೀಯ ಪಕ್ಷವಾಗಿ ಬೆಳೆಸಲಿಲ್ಲ. ಪಕ್ಷವನ್ನು ಕೇವಲ ಕುಟುಂಬದ ಹಿಡಿತಕ್ಕೆ ಸೀಮಿತಗೊಳಿಸಿದರು. ಆದ್ದರಿಂದ ಯಾರೂ ಬೆಳೆಯಲು ಸಾಧ್ಯವಾಗಲಿಲ್ಲ ಎಂದು ಗರಂ ಆದರು.