ಸಕ್ಕರೆ ನಾಡಲ್ಲಿ ರಂಗೇರಿತು ಉಪಸಮರ- ಭದ್ರಕೋಟೆ ಉಳಿಸಿಕೊಳ್ಳಲು ‘ದಳ’ ಕಸರತ್ತು

Public TV
1 Min Read
jds

ಮಂಡ್ಯ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ಟೋಬರ್ 21ಕ್ಕೆ ಉಪಚುನಾವಣೆ ನಡೆಯುವ ಘೋಷಣೆಯ ಬೆನ್ನಲ್ಲೇ ಸಕ್ಕರೆ ನಾಡು ಮಂಡ್ಯದಲ್ಲಿ ಎಲೆಕ್ಷನ್ ಚಟುವಟಿಕೆಗಳು ಗರಿಗೆದರಿದೆ.

ಕೆ.ಆರ್ ಪೇಟೆ ಕ್ಷೇತ್ರ ದಳಪತಿಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಸೂಕ್ತ ಅಭ್ಯರ್ಥಿಗಾಗಿ ಜೆಡಿಎಸ್ ತಲಾಶ್ ಮಾಡುತ್ತಿದೆ. ಈ ಮೂಲಕ ಭದ್ರಕೋಟೆ ಉಳಿಸಿಕೊಳ್ಳಲು ಜೆಡಿಎಸ್ ಗೆಲ್ಲುವ ಅಭ್ಯರ್ಥಿಗಾಗಿ ಹುಡುಕಾಟ ಆರಂಭ ಮಾಡಿದೆ. ಜೆಡಿಎಸ್ ನಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾಗಿದ್ದ ಕೆ.ಸಿ ನಾರಾಯಣಗೌಡರ ಅನರ್ಹತೆಯಿಂದ ಕೆ.ಆರ್.ಪೇಟೆ ಕ್ಷೇತ್ರ ತೆರವಾಗಿತ್ತು. ಹೀಗಾಗಿ ಈ ಉಪ ಚುನಾವಣೆಯಲ್ಲಿ ಗೆದ್ದು ಭದ್ರಕೋಟೆ ಉಳಿಸಿಕೊಳ್ಳಲು ಜೆಡಿಎಸ್ ಕಸರತ್ತು ನಡೆಸುತ್ತಿದೆ.

Narayanagowda

ಈಗಾಗಲೇ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಕೆ.ಆರ್.ಪೇಟೆಯಿಂದ ನಿಖಿಲ್ ಸ್ಪರ್ಧೆ ಇಲ್ಲ ಎಂದಿದ್ದಾರೆ. ಇದರಿಂದ ಸ್ಥಳೀಯ ಅಭ್ಯರ್ಥಿಗಳಿಂದ ಟಿಕೆಟ್ ಗಾಗಿ ಫೈಟ್ ಶುರುವಾಗಿದೆ. ಮಾಜಿ ಜಿಪಂ ಸದಸ್ಯ ಬಿ.ಎಲ್.ದೇವರಾಜು, ಪ್ರಭಾವಿ ಮುಖಂಡ ಬಸ್ ಕೃಷ್ಣೇಗೌಡ, ಜಿಪಂ ಹಾಲಿ ಸದಸ್ಯ ಎಚ್.ಟಿ.ಮಂಜುನಾಥ್ ರಿಂದ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿದೆ. ಮೂವರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

HDD HDK

ದೇವೇಗೌಡರ ಪುತ್ರಿ ಅನುಸೂಯ, ಕುಮಾರಸ್ವಾಮಿ ಮೂಲಕ ಟಿಕೆಟ್ ಗಿಟ್ಟಿಸಲು ತಂತ್ರ ಆರಂಭ ಮಾಡಿದ್ರೆ, ಇತ್ತ ಅನುಸೂಯ ಮೂಲಕ ದೇವೇಗೌಡರ ಮೇಲೆ ಬಸ್ ಕೃಷ್ಣೇಗೌಡ ಒತ್ತಡ ಹಾಕುತ್ತಿದ್ದಾರೆ. ಜೆಡಿಎಸ್ ನಾಯಕರ ಮೂಲಕ ಕುಮಾರಸ್ವಾಮಿ ಮೇಲೆ ಎಚ್.ಟಿ.ಮಂಜುನಾಥ್ ಒತ್ತಡ ಹಾಕುತ್ತಿದ್ದಾರೆ. ಎಚ್‍ಡಿಡಿ ಮನೆಯಿಂದ ಯಾರೇ ಸ್ಪರ್ಧಿಸಿದ್ರೂ ಕೆಲಸ ಮಾಡುತ್ತೇವೆ. ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವುದಾದರೆ ತಮಗೆ ಅವಕಾಶ ನೀಡಿ ಎಂದು ಮೂವರೂ ದುಂಬಾಲು ಬಿದ್ದಿದ್ದಾರೆ. ಒಟ್ಟಿನಲ್ಲಿ ದೇವೇಗೌಡರ ಪುತ್ರಿ ಅನುಸೂಯ ಅವರು ಸೂಚಿಸಿದ ವ್ಯಕ್ತಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿವೆ.

 

Share This Article
Leave a Comment

Leave a Reply

Your email address will not be published. Required fields are marked *