ಮಂಡ್ಯ: ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಬಿಎಸ್‍ವೈ ಹುಟ್ಟೂರು ಬೂಕನಕೆರೆಯಲ್ಲಿಯೂ ಸಹ ಸಂಭ್ರಮ ಮುಗಿಲು ಮುಟ್ಟಿದೆ.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಇಂದು ಸಂಜೆ ಬಿಎಸ್‍ವೈ ಪ್ರಮಾಣ ವಚನ ಸ್ವೀಕಾರದ ವೇಳೆ ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಗ್ರಾಮದ ಗೋಗಾಲಮ್ಮ, ಈಶ್ವರ-ಪಾರ್ವತಿ ದೇವಾಲಯ, ವೆಂಕಟರಮಣ ಸ್ವಾಮಿ ದೇಗುಲಗಳಲ್ಲಿ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ, ಅಭಿಷೇಕ ಸೇರಿದಂತೆ ವಿಶೇಷ ಪೂಜೆಯನ್ನು ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
Advertisement
Advertisement
ಸಂಜೆ 5 ಗಂಟೆಯಿಂದ ಪೂಜಾ ಕೈಂಕರ್ಯಗಳು ಆರಂಭವಾಗಲಿದ್ದು, ಇದೇ ವೇಳೆ ಸಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದ್ದಾರೆ. ಬಿಎಸ್‍ವೈ ಮನೆ ದೇವರಿಗೂ ಸಹ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
Advertisement
Advertisement
ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿ ಗವಿ ಮಠದ ಸ್ವತಂತ್ರ ಸಿದ್ದಲಿಂಗೇಶ್ವರ ಬಿ.ಎಸ್.ಯಡಿಯೂರಪ್ಪನವರ ಮನೆ ದೇವರಾಗಿದ್ದು, ಗವಿ ಮಠದ ಪೀಠಾಧ್ಯಕ್ಷ ಸ್ವತಂತ್ರ ಚೆನ್ನವೀರಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸಂಜೆ 5 ಗಂಟೆಯಿಂದ ವಿಶೇಷ ಪೂಜೆ ಆರಂಭವಾಗಲಿದೆ. ಯಾವುದೇ ಅಡೆ ತಡೆಗಳಿಲ್ಲದೇ ಅಧಿಕಾರ ನಿರ್ವಹಿಸುವ ಶಕ್ತಿಯನ್ನು ಬಿ.ಎಸ್.ಯಡಿಯೂರಪ್ಪನವರಿಗೆ ನೀಡಲೆಂದು ಪ್ರಾರ್ಥಿಸಿ ಗ್ರಾಮಸ್ಥರು ಪೂಜೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.