ಮಂಡ್ಯ: ನಿರಂತರವಾಗಿ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗಂಟಲು ಇಂದು ಕೈಕೊಟ್ಟಿದ್ದು ವೇದಿಕೆ ಮೇಲೆ ಮಾತನಾಡೋಕೆ ಹರಸಾಹಸ ಪಟ್ಟರು.
ಜಿಲ್ಲೆಯ ಪಾಂಡವಪುರದಲ್ಲಿ ನಡೆದ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ವೇದಿಕೆ ಮೇಲೆ ಮಾತನಾಡಲು ಯಡಿಯೂರಪ್ಪ ಬಳಲಿದಂತೆ ಕಂಡು ಬಂದರು. ಭಾಷಣದ ಮಧ್ಯದಲ್ಲಿ ನಿಲ್ಲಿಸಿ ಸ್ವಲ್ಪ ನೀರು ಕುಡಿದು ಪುನಃ ಭಾಷಣ ಆರಂಭಿಸಿದರು. ಸತತವಾಗಿ ಪರಿವರ್ತನಾ ಯಾತ್ರೆ 78 ಕಾಲಿಟ್ಟಿದೆ, 214 ನೇ ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡಿದ್ದು, ಸುಮಾರು ಒಂದು ಕೋಟಿ 75 ಲಕ್ಷ ಜನರನ್ನು ನೇರವಾಗಿ ಮಾತನಾಡಿದ್ದೇನೆ ಎಂದರು.
ಇದೇ ವೇಳೆ ಮಂಡ್ಯದಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸದೆ ಇರುವ ಬಗ್ಗೆ ನೋವು ಹೊರಹಾಕಿದರು. ಈ ಬಾರಿ ಪಕ್ಷಕ್ಕೆ ಯೋಗ್ಯ ಅಭ್ಯರ್ಥಿಗಳು ಸಿಕ್ಕಿದ್ದು, ಮಂಡ್ಯ ಜಿಲ್ಲೆಯಲ್ಲಿ ಕನಿಷ್ಟ ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಕಮಲ ಅರಳಿಸುವ ತಂತ್ರ: ಜಿಲ್ಲೆಯಲ್ಲಿ ಕಮಲ ಅರಳಿಸಲು ರಣತಂತ್ರ ರೂಪಿಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಒಕ್ಕಲಿಗ ಮುಖಂಡರು ಮತ್ತು ಎಸ್‍ಎಂ.ಕೃಷ್ಣ ಅವರ ಬೆಂಬಲಿಗರನ್ನು ಬಿಜೆಪಿ ಪಕ್ಷಕ್ಕೆ ಕರೆತರಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಈ ಹಿನ್ನೆಲೆ ಪಾಂಡವಪುರದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸುವ ಮುನ್ನ ಬಿಎಸ್‍ವೈ, ಎಸ್.ಎಂ.ಕೃಷ್ಣ ಬೆಂಬಲಿಗ ಹಾಗೂ ಒಕ್ಕಲಿಗ ಮುಖಂಡರಾದ ಎಚ್.ಮಂಜುನಾಥ್‍ರ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದರು.
ಎಸ್‍ಎಂ.ಕೃಷ್ಣ ಅವರ ನಿಷ್ಠಾವಂತ ಬೆಂಬಲಿಗರಾದ ಮಂಜುನಾಥ್ ಮೇಲುಕೋಟೆ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಎಸ್‍ಎಂ ಕೃಷ್ಣ ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾದ ನಂತರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಮಂಜುನಾಥ್ ರಾಜಕೀಯವಾಗಿ ಯಾವ ಪಕ್ಷಕ್ಕೂ ಸೇರದೆ ತಟಸ್ಥವಾಗಿದ್ದಾರೆ. ಶುಕ್ರವಾರ ಮದ್ದೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಎಸ್‍ಎಂ.ಕೃಷ್ಣ ತಮ್ಮ ಬೆಂಬಲಿಗರಿಗೆ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಜೊತೆಗೆ ಒಕ್ಕಲಿಗ ಸಮುದಾಯ ಕೂಡ ಬಿಜೆಪಿ ಪರ ನಿಲ್ಲುವಂತೆ ಪರೋಕ್ಷವಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಂಜುನಾಥ್ ಮನೆಗೆ ಭೇಟಿ ನೀಡಿದ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಬರುವಂತೆ ಆಹ್ವಾನಿಸಿದರು. ಯಡಿಯೂರಪ್ಪ ಅವರ ಭೇಟಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮಂಜುನಾಥ್ ಶೀಘ್ರದಲ್ಲೆ ಎಸ್‍ಎಂ.ಕೃಷ್ಣ ಅವರ ಜೊತೆ ಚರ್ಚಿಸಿ ತಮ್ಮ ಬೆಂಗಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.