ಮಂಡ್ಯ: ಕಳೆದ ವರ್ಷ ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ನಡೆದ ಬಸ್ ದುರಂತ ಇನ್ನೂ ಕೂಡ ಮಾಸಿಲ್ಲ. 30 ಜನರನ್ನು ಆಹುತಿ ಪಡೆದ ಈ ಬಸ್ ದುರಂತದ ಬಗ್ಗೆ ಕೇಳಿದರೆ ಸಾಕು ದುರಂತದಲ್ಲಿ ಬದುಕಿ ಬಂದ ಬಾಲಕ ರೋಹಿತ್ ಬಿಕ್ಕಿಬಿಕ್ಕಿ ಅಳುತ್ತಾನೆ.
2018 ನವಂಬರ್ 24ರಂದು ನಡೆದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಮಧ್ಯಾಹ್ನದ ವೇಳೆ ಬಸ್ ಕಾಲುವೆಗೆ ಉರುಳಿದ ಪರಿಣಾಮ 30 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಈ ಪೈಕಿ ಬಸ್‍ನಲ್ಲಿದ್ದ ರೋಹಿತ್ ಮಾತ್ರ ಬದುಕಿ ಬಂದಿದ್ದನು. ಈ ದುರಂತದಲ್ಲಿ ಹಲವು ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ರೆ, ಇನ್ನೂ ಹಲವು ಮಕ್ಕಳು ತಮ್ಮ ತಂದೆ-ತಾಯಿಗಳನ್ನು ಕಳೆದುಕೊಂಡಿದ್ದರು. ಮತ್ತು ಕೆಲವರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಇಂದಿಗೂ ಸಹ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯ ಬಸ್ ದುರಂತ ಪ್ರಕರಣ ಹೇಳುತ್ತಿದೆ ಮನಕಲಕುವ ಕಥೆ!
Advertisement
Advertisement
ಆ ಬಸ್ ದುರಂತದಲ್ಲಿ ಬದುಕಿ ಬಂದಿರುವ ಬಾಲಕ ರೋಹಿತ್‍ನಲ್ಲಿ ಮಾತ್ರ ಆ ದುರಂತದ ಕಪ್ಪು ಛಾಯೆ ಇಂದಿಗೂ ಕೂಡ ಅಳಿದಿಲ್ಲ. ಬಸ್ ಎಂದರೆ ಸಾಕು ರೋಹಿತ್ ಬಿಕ್ಕಿಬಿಕ್ಕಿ ಅಳುವುದಕ್ಕೆ ಶುರು ಮಾಡುತ್ತಿದ್ದಾನೆ. ಯಾಕಪ್ಪಾ ಏನಾಯಿತು ಎಂದು ಕೇಳಿದ್ರೂ ಏನು ಹೇಳದೇ ಸುಮ್ಮನೆ ಕಣ್ಣೀರು ಹಾಕುತ್ತಾನೆ. ರೋಹಿತ್‍ನ ಕಣ್ಣೆದುರೇ ತನ್ನ ಸ್ನೇಹಿತರು ತನ್ನೂರಿನ ಜನರು ಹಾಗೂ ನೆಂಟರುಗಳು ಜಲ ಸಮಾಧಿಯಾಗಿದ್ದರು. ಇದನ್ನು ಕಣ್ಣಾರೆ ಕಂಡಿರುವ ರೋಹಿತ್, ಇಂದಿಗೂ ಸಹ ಅದ್ಯಾವುದನ್ನೂ ಮರೆತಿಲ್ಲ. ಘಟನೆ ನಡೆದು ಒಂದು ವರ್ಷ ಕಳೆದರು ಸಹ ಆತ ಬಸ್ ಮತ್ತು ನೀರಿನ ಹೆಸರು ಹೇಳಿದ್ರೆ, ಒಂದು ಅಕ್ಷರವನ್ನು ಮಾತಾಡಾದೇ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾನೆ. ಇದನ್ನೂ ಓದಿ: ಮಂಡ್ಯ ಬಸ್ ದುರಂತ- ಇಬ್ಬರು ಹೆಣ್ಣುಮಕ್ಕಳ ಸಮಾಧಿ ಬಳಿ ಹೋಗಿ ತಂದೆ ಕಣ್ಣೀರು
Advertisement
Advertisement
ರೋಹಿತ್ ತನ್ನ ಕಣ್ಣೆದುರು ನಡೆದ ಘಟನೆಯನ್ನು ನೋಡಿ ಹೀಗೆ ಕಣ್ಣೀರು ಹಾಕುತ್ತಿದ್ರೆ, ಇನ್ನೊಂದೆಡೆ ತಮ್ಮವರನ್ನು ಕಳೆದುಕೊಂಡವರು ಕೂಡ ಅದೇ ನೆನಪಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಕನಗನಮರಡಿ ಗ್ರಾಮದ ಪಕ್ಕದಲ್ಲಿರುವ ವದೆಸಮುದ್ರ ಗ್ರಾಮದವರೇ ಅತೀ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಈ ಗ್ರಾಮದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಕೆಲವರು ಮಕ್ಕಳನ್ನು ಕಳೆದುಕೊಂಡಿದ್ರೆ, ಇನ್ನೂ ಕೆಲವರು ತಂದೆ-ತಾಯಿ ಹಾಗೂ ಕುಟಂಬಸ್ಥರನ್ನು ಕಳೆದುಕೊಂಡಿದ್ದಾರೆ. ಬದುಕಿ ಬಂದಿರುವ ರೋಹಿತ್ ಕೂಡ ಇದೇ ಗ್ರಾಮದ ಬಾಲಕ. ಸರ್ಕಾರ ಆ ವೇಳೆ ಪರಿಹಾರವನ್ನು ಸಹ ಆಯಾ ಕುಟಂಬಗಳಿಗೆ ನೀಡಿದೆ. ಇಲ್ಲಿನ ಜನರು ಸರ್ಕಾರ ನಮಗೆ ಆ ವೇಳೆ ಎಲ್ಲಾ ರೀತಿಯಲ್ಲೂ ಸ್ಪಂದನೆಯನ್ನು ನೀಡಿತು. ಆದರೆ ಏನೇ ನೀಡಿದ್ರು ನಮ್ಮವರು ಈಗ ನಮಗೆ ಮರಳಿ ಬರುವುದಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.