ಗೌಡರ ಭದ್ರಕೋಟೆಯಲ್ಲಿ ಕೇಸರಿ ರಣವ್ಯೂಹ-ಚಕ್ರವೂಹ್ಯ ಬೇಧಿಸ್ತಾರಾ ದೊಡ್ಡಗೌಡರ ಮೊಮ್ಮಕ್ಕಳು

Public TV
2 Min Read
nikhil prajwal

ಮಂಡ್ಯ/ಹಾಸನ: ಮಂಡ್ಯ ಹಾಗು ಹಾಸನ ದೇವೇಗೌಡರ ಕುಟುಂಬದ ಭದ್ರಕೋಟೆ. ಹೀಗಾಗಿ ಗೌಡರ ಈ ಕೋಟೆಯನ್ನು ಬೇಧಿಸಲು ರಣತಂತ್ರ ರೆಡಿಯಾಗಿದೆ. ನಿಖಿಲ್ ಹಾಗೂ ಪ್ರಜ್ವಲ್‍ರನ್ನು ಖೆಡ್ಡಾಗೆ ಕೆಡವಲು ಬಿಜೆಪಿ ಶತಾಯಗತಾಯ ಪ್ರಯತ್ನಿಸ್ತಾ ಇದ್ದು ಹಾಸನದಲ್ಲಿ ಗೌಡರ ಕಡು ಎದುರಾಳಿ ಮಂಜು ಕಣಕ್ಕಿಳಿಯುತ್ತಿದ್ದಾರೆ. ಇತ್ತ ಸುಮಲತಾ ಇಂದು ತಮ್ಮ ಸ್ಪರ್ಧೆಯ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ.

ದೇಶದಲ್ಲಿ ಚುನಾವಣಾ ಜ್ವರ ತಾರಕಕ್ಕೇರಿರುವಂತೆ ರಾಜ್ಯದ ಹೈವೊಲ್ಟೇಜ್ ಕ್ಷೇತ್ರಗಳಾದ ಹಾಸನ ಹಾಗೂ ಮಂಡ್ಯ ಕೊತ ಕೊತ ಕುದಿಯುತ್ತಿವೆ. ಜೆಡಿಎಸ್ ಭದ್ರಕೋಟೆಗಳಾಗಿರುವ ಈ ಉಭಯ ಕ್ಷೇತ್ರಗಳಲ್ಲಿ ಈ ಬಾರಿ ಗೌಡರನ್ನು ಸೋಲಿಸಲು ರಣತಂತ್ರ ರೆಡಿಯಾಗಿದೆ. ಒಕ್ಕಲಿಗರ ಪ್ರಾಬಲ್ಯದ ಈ ಸಾಂಪ್ರದಾಯಿಕ ಕ್ಷೇತ್ರಗಳೇ ದೇವೇಗೌಡರ ದೊಡ್ಡ ಶಕ್ತಿ. ಹೀಗಾಗಿ ತಮ್ಮ ಇಬ್ಬರು ಮೊಮ್ಮಕ್ಕಳನ್ನು ಅಖಾಡಕ್ಕಿಳಿಸಿದ್ದಾರೆ. ಆದರೆ ದೇವೇಗೌಡರನ್ನ ಅವರ ಕ್ಷೇತ್ರದಲ್ಲೇ ಸೋಲಿಸಲು ಚಕ್ರವ್ಯೂಹ ರೆಡಿಯಾಗಿದೆ. ಹಾಸನದಲ್ಲಿ ಪ್ರಜ್ವಲ್ ಎದುರಿಗೆ ದೇವೇಗೌಡರ ಕಡುವೈರಿ ಎ.ಮಂಜು ಕಣಕ್ಕಿಳಿಯುತ್ತಿದ್ದಾರೆ. ನಿನ್ನೆಯೆವರೆಗೆ ಕಾಂಗ್ರೆಸ್ ಪಾಳಯದಲ್ಲಿದ್ದ ಎ.ಮಂಜು ಈಗ ಕೇಸರಿ ಪಾಳಯಕ್ಕೆ ಹಾರಿದ್ದಾರೆ. ಭಾನುವಾರ ಹಾಸನದಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯ ಪಡೆಯೋ ಮೂಲಕ ಕಮಲಕ್ಕೆ ಜೈ ಎಂದಿದ್ದಾರೆ.

nikhil ambi 2

ದೇವೇಗೌಡರ ಸ್ವಕ್ಷೇತ್ರ ಹಾಸನದಲ್ಲಿ ಎ.ಮಂಜು ಸಾಮಥ್ರ್ಯವನ್ನ ಅಲ್ಲಗಳೆಯೋ ಹಾಗಿಲ್ಲ. ಸದ್ಯದ ಮಟ್ಟಿಗೆ ಇವರೇ ದೊಡ್ಡಗೌಡರಿಗೆ ಸೆಡ್ಡು ಹೊಡೆಯೋ ನಾಯಕ. ಹೀಗಾಗಿ ಬಿಜೆಪಿ ಎ.ಮಂಜು ಆಗಮನದಿಂದ ಫುಲ್ ಜೋಶ್ ನಲ್ಲಿದೆ. ಪ್ರಜ್ವಲ್‍ಗೆ ಹೋಲಿಸಿದ್ರೆ ಎ.ಮಂಜುಗೆ ರಾಜಕೀಯದ ಸಾಕಷ್ಟು ಅನುಭವವಿದೆ. ಅಲ್ಲದೆ ಜಿಲ್ಲೆಯ ಒಕ್ಕಲಿಗರ ಮೇಲೆ ದೇವೇಗೌಡರಷ್ಟೇ ಸರಿ ಸಮಾನವಾಗಿ ಹಿಡಿತ ಹೊಂದಿದ್ದಾರೆ. ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಹಾಗಂತ ಪ್ರಜ್ವಲ್‍ರನ್ನ ಸಲೀಸಾಗಿ ಸೋಲಿಸಲಕ್ಕಾಗೋದಿಲ್ಲ. ಖುದ್ದು ದೊಡ್ಡ ಗೌಡರೇ ಪ್ರಜ್ವಲ್ ಪರ ನಿಂತಿರೋದು ಪ್ಲಸ್ ಪಾಯಿಂಟ್ ಅಲ್ಲದೆ ರೇವಣ್ಣ ಮತ್ತು ದೇವೇಗೌಡರ ಅಭಿವೃದ್ಧಿ ಕಾರ್ಯಗಳು ಕೂಡ ಕೈ ಹಿಡಿಯಬಹುದು.

ಇತ್ತ ಮಂಡ್ಯದಲ್ಲೂ ದೇವೇಗೌಡರ ಕಿರಿಯ ಮೊಮ್ಮಗ ನಿಖಿಲ್ ಹಾದಿಯೂ ಸುಗಮವಾಗಿಲ್ಲ. ಸುಮಲತಾ ಅಂಬರೀಶ್ ಎಂಟ್ರಿ ಇಡೀ ಚಿತ್ರಣವನ್ನೇ ಬದಲಿಸಿದೆ. ಮೇಲ್ನೋಟಕ್ಕೆ ಮಂಡ್ಯ ಜೆಡಿಎಸ್ ಭದ್ರಕೋಟೆಯೇನೋ ನಿಜ. ಆದ್ರೆ ಅಂಬಿ ಅಭಿಮಾನಿಗಳು ಜೆಡಿಎಸ್‍ಗೆ ದೊಡ್ಡ ತಲೆನೋವಾಗಿದ್ದಾರೆ. ವಿಚಿತ್ರ ಅಂದ್ರೆ ಸುಮಲತಾ ಅಂಬರೀಶ್ ಮಗ ಅಭಿಷೇಕ್ ಸ್ನೇಹಿತ ನಿಖಿಲ್ ಕುಮಾರಸ್ವಾಮಿ ಎದುರಿಗೆ ಅಖಾಡದಲ್ಲಿದ್ದಾರೆ. ಅಂಬಿ ಅಭಿಮಾನವನ್ನೆ ನೆಚ್ಚಿಕೊಂಡು ಕಣಕ್ಕಿಳಿದಿರೋ ಸುಮಲತಾಗೆ ಜನರ ಭರಪೂರ ಬೆಂಬಲವೂ ಸಿಗುತ್ತಿದೆ. ಜೊತೆಗೆ ಕಾಂಗ್ರೆಸ್ ಅಸಮಾಧಾನ ವರವಾಗೋ ಸಾಧ್ಯತೆಗಳಿವೆ.

PRAJWAL MANJU

ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸ್ತಾ ಇರೋ ಸುಮಲತಾ ಇಂದು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ಇತ್ತ ನಿಖಿಲ್ ಕುಮಾರಸ್ವಾಮಿ ಪ್ರಚಾರ ಕೂಡ ಜೋರಾಗಿ ನಡೆದಿದೆ. ಸುಮಲತಾ ಸ್ಪರ್ಧೆ ಮೈತ್ರಿ ಪಕ್ಷಕ್ಕೆ ತಲೆ ನೋವಾಗಿದೆ. ವಿಚಿತ್ರ ಅಂದ್ರೆ ಸುಮಲತಾ ಸ್ಪರ್ಧೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂತಸದ ವಿಷಯವಾಗಿದೆ. ಒಟ್ಟಾರೆ ದೇವೇಗೌಡರ ಕುಟುಂಬವನ್ನ ಕಟ್ಟಿ ಹಾಕಲು ರಣತಂತ್ರ ತಯಾರಾಗಿದ್ದು, ಎಲೆಕ್ಷನ್ ಚಕ್ರವ್ಯೂಹದಲ್ಲಿ ನಿಖಿಲ್-ಪ್ರಜ್ವಲ್ ಗೆಲ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *