ಅರುಣ್ ಅಮುಕ್ತ (Arun Amukta) ನಿರ್ದೇಶನದ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಚಿತ್ರ ಕಾಲೇಜು ವಾತಾವರಣದಲ್ಲಿ ಘಟಿಸುವ ಕಥೆಯನ್ನೊಳಗೊಂಡಿದೆ. ಬಹುಶಃ ಅದರ ಸುತ್ತ ಹಬ್ಬಿಕೊಂಡಿರುವ ಕೌತುಕಗಳ ಹಿಂದೆ ಇಂತಹ ಕಾಲೇಜ್ ಹಿನ್ನೆಲೆಯ ಸ್ಟೋರಿಯ ಬಲವೇ ಪ್ರಧಾನವಾಗಿ ಕೆಲಸ ಮಾಡಿದೆ. ಇದೀಗ ಚಿತ್ರೀಕರಣ ಮುಗಿಸಿಕೊಂಡು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಿಗೆ ಸಜ್ಜುಗೊಂಡಿರುವ ಚಿತ್ರತಂಡ, ಪತ್ರಿಕಾ ಗೋಷ್ಠಿಯೊಂದರ ಮೂಲಕ ಮಾಧ್ಯಮದವರನ್ನು ಮುಖಾಮುಖಿಯಾಗಿದೆ. ಈ ನೆಪದಲ್ಲಿ ಪಾತ್ರಗಳ ಚಹರೆ, ಅದಕ್ಕಾಗಿ ನಡೆದ ಆಯ್ಕೆ ಮುಂತಾದ ಒಂದಷ್ಟು ಕುತೂಹಲಕರ ಸಂಗತಿಗಳು ಅನಾವರಣಗೊಂಡಿವೆ.
Advertisement
ನಿರ್ದೇಶಕ ಅರುಣ್ ಅಮುಕ್ತ ಇಲ್ಲಿನ ಪ್ರತೀ ಅಂಶಗಳನ್ನೂ ಪ್ರಧಾನವಾಗಿ ಪರಿಗಣಿಸಿ ಈ ಸಿನಿಮಾವನ್ನು ರೂಪಿಸಿದ್ದಾರೆ. ಅದರಲ್ಲಿಯೂ ಇಲ್ಲಿನ ಪ್ರತ್ಯೇಕ ಪಾತ್ರಗಳಿಗೂ ಕೂಡಾ ಅಳೆದೂ ತೂಗಿ, ಆಡಿಷನ್ ನಡೆಸುವ ಮೂಲಕ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರ ಮೂರು ಪ್ರಧಾನ ಜೋಡಿಗಳಿಗೆ ಹೊಸ ಮುಖಗಳನ್ನೇ ಆಯ್ಕೆ ಮಾಡಲಾಗಿದೆ. ಅದರಲ್ಲೊಂದು ನಾಯಕಿಯ ಪಾತ್ರಕ್ಕೆ ಚೆಲ್ಲುಚೆಲ್ಲಾಗಿ ವರ್ತಿಸುವ, ನೋಡಿದಾಕ್ಷಣ ಅಂಥಾದ್ದೇ ಫೀಲ್ ಬರುವ ಕಲಾವಿದೆಯ ಅವಶ್ಯಕತೆ ಇತ್ತು. ಅದಕ್ಕಾಗಿ ಆಡಿಷನ್ ನಡೆಸಿದಾಗ ಸಿಕ್ಕ ಹುಡುಗಿ ಮಾನಸಿ.
Advertisement
Advertisement
ಮಾನಸಿ (Manasi) ಈ ವಿಚಾರವಾಗಿ ಒಂದಷ್ಟು ವಿಚಾರಗಳನ್ನು ಈ ಪತ್ರಿಕಾಗೋಷ್ಠಿಯ ಮೂಲಕ ಹಂಚಿಕೊಂಡಿದ್ದಾರೆ. ಮಾನಸಿ ಈಗಷ್ಟೇ ಸೆಕೆಂಡ್ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ. ಆಡಿಷನ್ ಮೂಲಕವೇ ತನ್ನನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿಕೊಂಡು, ನಾಯಕಿಯಾಗಲು ಅವಕಾಶ ಕಲ್ಪಿಸಿದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಮಾನಸಿ ಧನ್ಯವಾದ ಸಲ್ಲಿಸಿದ್ದಾರೆ. ಅವರೇ ಹೇಳಿಕೊಂಡಿರೋ ಪ್ರಕಾರ ಹೇಳೋದಾದರೆ, ಚೈಲ್ಡ್ ಚೈಲ್ಡಾಗಿ ವರ್ತಿಸುವ, ಲವಲವಿಕೆಯ ಪಾತ್ರಕ್ಕವರು ಜೀವ ತುಂಬಿದ್ದಾರಂತೆ.
Advertisement
ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.