ಕಾಡು ಮತ್ತು ಅದರೊಳಗಿನ ನಿಶ್ಯಬ್ಧ ನಿಗೂಢಗಳು ಯಾವತ್ತಿಗೂ ಸಿನಿಮಾ ಸೃಷ್ಟಿಕರ್ತರನ್ನು ಸೆಳೆಯುತ್ತಲೇ ಇರುತ್ತವೆ. ಆದರೆ ಅವರವರ ಅಭಿರುಚಿಗೆ ತಕ್ಕಂತೆ ಅದು ದೃಶ್ಯದ ಚೌಕಟ್ಟಿಗೆ ಒಗ್ಗುತ್ತಾ ಬಂದಿದೆ. ಆದರೂ ಸಹ ಕಾಡೊಳಗೆ ದೃಷ್ಟಿ ನೆಟ್ಟು ಅದರೊಳಗೆ ಕದಲುವ ಕಥೆಗಳಿಗಾಗಿ ಕಾತರರಾಗಿರುವ ಪ್ರೇಕ್ಷಕರ ಸಂಖ್ಯೆ ಬಹಳಷ್ಟಿದೆ. ಅದನ್ನು ಬೇರೆಯದ್ದೇ ರೀತಿಯಲ್ಲಿ ತೃಪ್ತಗೊಳಿಸುವಂತೆ ರೂಪುಗೊಂಡಿರೋ ‘ಮನರೂಪ’ ಚಿತ್ರವೀಗ ತೆರೆ ಕಂಡಿದೆ. ಬಿಡುಗಡೆಗೂ ಮುನ್ನವೇ ಹೊರಳಿಕೊಂಡಿದ್ದ ನಿರೀಕ್ಷೆಯ ನೋಟಗಳೆಲ್ಲ ಥ್ರಿಲ್ ಆಗುವಂಥಾ ಸಮ್ಮೋಹಕ ಶೈಲಿಯಲ್ಲಿ ಮೂಡಿ ಬಂದಿರುವ ಮನರೂಪ ಪ್ರೇಕ್ಷಕರನ್ನು ಮೋಡಿಗೀಡು ಮಾಡುವಲ್ಲಿ ಸಫಲವಾಗಿದೆ.
Advertisement
ಮಾಮೂಲಿ ಜಾಡಿನ ಭರಾಟೆ ಅದೇನೇ ಇದ್ದರೂ ಕನ್ನಡದ ಪ್ರೇಕ್ಷಕರು ಹೊಸ ಅಲೆಯ ಚಿತ್ರಗಳಿಗಾಗಿ ಕಾತರಿಸುತ್ತಾರೆ. ಅವರೆಲ್ಲರ ಪಾಲಿಗೆ ಮಾತ್ರವಲ್ಲದೆ ಎಲ್ಲರನ್ನೂ ತಾಜಾತನದೊಂದಿಗೆ ತೃಪ್ತಗೊಳಿಸಬಲ್ಲ ಚಿತ್ರ ಮನರೂಪ. ನಿರ್ದೇಶಕ ಕಿರಣ್ ಹೆಗ್ಡೆ ಅಂಥಾ ಶೈಲಿಯಲ್ಲಿ, ಹೊಸತನದೊಂದಿಗೆ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಸೀಮಿತ ಪ್ರದೇಶದೊಳಗೆ ಸುತ್ತಾಡುತ್ತಾ ಏಕತಾನತೆ ಹುಟ್ಟಿಸುವಂತೆ ರೂಪುಗೊಳ್ಳೋದೂ ಇದೆ. ಮನರೂಪ ಕೂಡಾ ಕಾಡಿನಲ್ಲಿಯೇ ಬಹುಪಾಲು ನಡೆಯುತ್ತದಾದರೂ ಎಲ್ಲಿಯೂ ಬೋರು ಹೊಡೆಸೋದಿಲ್ಲ. ಕಾಡಿನ ತಪ್ಪಲಲ್ಲಿ ಸುತ್ತಾಡಿಸಿದರೂ ಕುತೂಹಲದ ಒರತೆ ಬತ್ತುವುದಿಲ್ಲ. ಕಣ್ಣಿಗೆ ಹಬ್ಬವಾಗುವಂಥಾ, ಮನಸಿಗೆ ನಾಟಿಕೊಳ್ಳುವ ದೃಶ್ಯಾವಳಿಗಳೊಂದಿಗೆ ಬಿಚ್ಚಿಕೊಳ್ಳುವ ಮನರೂಪ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿಯೂ ವಿಭಿನ್ನ ಜಾಡೊಂದನ್ನು ಕಂಡುಕೊಂಡಿರೋ ಚಿತ್ರ.
Advertisement
Advertisement
ತಂತಮ್ಮ ಕೆಲಸಗಳಲ್ಲಿ ಕಳೆದು ಹೋಗಿದ್ದ, ಅದರ ಏಕತಾನತೆಯಿಂದ ಬೇಸತ್ತಿದ್ದ ಸ್ನೇಹಿತರೊಂದಷ್ಟು ಮಂದಿ ಒಗ್ಗೂಡುತ್ತಾರೆ. ನಂತರ ರಿಲ್ಯಾಕ್ಸ್ ಆಗಲು ಕಾಡಿನೊಳಗೆ ಚಾರಣ ಹೋಗುತ್ತಾರೆ. ಅವರೆಲ್ಲರದ್ದೂ ಒಂದೊಂದು ಹಿನ್ನೆಲೆ. ಚಿತ್ರವಿಚಿತ್ರ ಆಲೋಚನೆಗಳನ್ನು ಹೊದ್ದಿರೋ ಮನೋಲೋಕ. ಈ ಕಥೆಯ ಮೂಲ ಸೆಲೆಯೂ ಅದರಲ್ಲೇ ಅಡಗಿದೆ. ಹಾಗೆ ಕಾಡೊಳಗೆ ಅಡಿಯಿರಿಸುವವರ ಮುಂದೆ ನಾನಾ ಘಟನಾವಳಿಗಳು ತೆರೆದುಕೊಳ್ಳುತ್ತವೆ. ಮನರೂಪದ ಅಸಲೀ ಕಥೆ ಅಲ್ಲಿಂದಲೇ ಆರಂಭವಾಗುತ್ತದೆ. ಐದು ಪಾತ್ರಗಳ ಮೂಲಕ ಒಂದು ಜನರೇಷನ್ನಿನ ಯುವಕ ಯುವತಿಯರ ಎಲ್ಲ ತಲ್ಲಣ ತಾಕಲಾಟಗಳನ್ನು ಬಿಚ್ಚಿಡುತ್ತಲೇ ರೋಚಕವಾಗಿ ಮುಂದುವರಿಯುವ ಮನರೂಪ ಸಸ್ಪೆನ್ಸ್ ಥ್ರಿಲ್ಲರ್ ಗುಣ ಎಲ್ಲಿಯೂ ಮಾಸದಂತೆ ನೋಡಿಕೊಂಡು ಮುಂದುವರಿಯುತ್ತದೆ.
Advertisement
ಕಾಡೊಳಗೇ ಕಥೆ ಘಟಿಸಿದರೂ ಅದು ಪ್ರತೀ ಫ್ರೇಮಿನಲ್ಲಿಯೂ ಲಕಲಕಿಸುವಂತೆ ಮಾಡುವಲ್ಲಿ ಗೋವಿಂದ ರಾಜ್ ಛಾಯಾಗ್ರಹಣ ಗೆದ್ದಿದೆ. ಒಂದು ವಿಶಿಷ್ಟ ಕಥೆಯನ್ನು ಎಲ್ಲಿಯೂ ಬೋರು ಹೊಡೆಸದಂತೆ, ಫ್ರಶ್‍ನೆಸ್ ಕಳೆದುಕೊಳ್ಳದಂತೆ ನೋಡಿಕೊಳ್ಳುವಲ್ಲಿ ನಿರ್ದೇಶಕ ಕಿರಣ್ ಹೆಗ್ಡೆ ಕೂಡಾ ಗೆದ್ದಿದ್ದಾರೆ. ಅನುಷಾ ರಾವ್, ನಿಶಾ ಬಿ ಆರ್, ಆರ್ಯನ್, ಶಿವಪ್ರಸಾದ್ ಮುಂತಾದವರ ನಟನೆ ಮನರೂಪವನ್ನು ಪರಿಣಾಮಕಾರಿಯಾಗಿಸಿದೆ. ಈ ಚಿತ್ರ ಹೊಸಾ ಅನುಭವವನ್ನು ನೋಡುಗರೆಲ್ಲರಿಗೂ ಕೊಡ ಮಾಡುವಂತಿದೆ.
ರೇಟಿಂಗ್: 3.5/5