Connect with us

Districts

ಮುಜುರಾಯಿ ದೇವಾಲಯಗಳಲ್ಲಿ ವ್ಯವಸ್ಥಾಪನಾ ಸಮಿತಿ ರಚನೆ: ಏನಿದು ವಿವಾದ? ಸಮಿತಿಯಲ್ಲಿ ಯಾರು ಇರುತ್ತಾರೆ?

Published

on

ಕಾರವಾರ: ಮುಜರಾಯಿ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳಲ್ಲಿ ರಾಜ್ಯಸರ್ಕಾರ ವ್ಯವಸ್ಥಾಪನಾ ಸಮಿತಿ ರಚನೆ ಮಾಡಲು ಮುಂದಾಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಪ್ರಕ್ರಿಯೆ ಚುರುಕು ಗೊಂಡಿದೆ. ಈ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಬುಧವಾರ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ವಿವಾದ ಏನು?
ಈ ಹಿಂದೆ ಮುಜರಾಯಿ ಇಲಾಖೆಯ ಕಾಯ್ದೆಯು ಕರ್ನಾಟಕದಲ್ಲಿ ಒಂದೊಂದು ಭಾಗಕ್ಕೆ ಅದರದೇ ಆದ ಕಾಯ್ದೆಯನ್ನು ಮಾಡಲಾಗಿತ್ತು. ಇದರಂತೆ ರಾಜ್ಯದಲ್ಲಿ ಮದ್ರಾಸ್, ಕೊಡಗು, ಮೈಸೂರು, ಹೈದರಾಬಾದ್, ಮುಂಬೈ ಕರ್ನಾಟಕ ದತ್ತಿ ನಿಯಮಗಳು ಜಾರಿಯಲ್ಲಿದ್ದು. ಒಂದೊಂದು ಭಾಗಕ್ಕೆ ಅದರದೇ ಆದ ಹಕ್ಕುಗಳು ಜಾರಿಯಲ್ಲಿದ್ದ ಕಾರಣ ಹಲವು ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿತ್ತು. ಈ ತೊಂದರೆಯನ್ನು ನೀಗಿಸಲು ಏಕರೂಪ ಶಾಸನ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿತ್ತು. ಇದರಂತೆ 1997 ಮತ್ತು ನಿಯಮಗಳು 20002 ಎಂಬ ಏಕರೂಪ ಮುಜರಾಯಿ ಕಾಯ್ದೆಯನ್ನು 2003ರ ಮೇ 1 ರಂದು ಜಾರಿಗೆ ತಂದಿದೆ. ಆದರೇ ಇದನ್ನು ಪ್ರಶ್ನಿಸಿ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾ ಮಂಡಳಿ ಧಾರವಾಡ ಕೋರ್ಟ ನಲ್ಲಿ ದಾವೇ ಹೂಡಿ ಈ ಕಾಯ್ದೆ ರದ್ದಾಗುವಂತಾಯ್ತು. ಇನ್ನು ಅಂದಿನ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳಾದ ರಾಮಜೋಯಿಸ್ ನೇತೃತ್ವದಲ್ಲಿ ಸಮಿತಿ ರಚಿಸಿ ಕಾಯ್ದೆಯನ್ನು ಜಾರಿಗೊಳಿಸಿತ್ತು.

ಇನ್ನು ಈ ಬಗ್ಗೆ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ ಕಾಯ್ದೆ ರದ್ದಾಗುವಂತೆ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯದ ಮಹಾಮಂಡಳಿಗಳು ಪ್ರಯತ್ನಿಸಿದ್ದವು, ಆದರೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದಿದೆ. ಅಲ್ಲದೇ ಕಾಯ್ದೆಯ ಕಾಲಂ 25, 29 ರ ಅಡಿಯಲ್ಲಿ ದೇವಸ್ಥಾನದ ಆಡಳಿತ ಸುಗಮವಾಗಿ ನಡೆಯಲು ಸಮಿತಿ ರಚನೆಗೆ ಅನುವು ಮಾಡಿಕೊಟ್ಟಿದೆ.

ಈ ಕಾಯ್ದೆಯನ್ನು ಸದುಪಯೋಗ ಪಡಿಸಿಕೊಂಡ ಅಂದಿನ ಬಿಜೆಪಿ ಸರ್ಕಾರ ಉಡುಪಿಯ ಕೃಷ್ಣ ದೇವಸ್ಥಾನ, ಗೋಕರ್ಣದ ಮಹಾಭಲೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಯಿಂದ ಕೈ ತಪ್ಪುವಂತೆ ಮಾಡಿತ್ತು. ಪ್ರಸ್ತುತ ಸಿಎಂ ಸಿದ್ಧರಾಮಯ್ಯ ನವರ ಸರ್ಕಾರ ಇದೇ ನಿಟ್ಟಿನಲ್ಲಿ ಮುಂದುವರೆದಿದ್ದು ದೇವಸ್ಥಾನದ ಆಡಳಿತ ಸುಗಮವಾಗಿ ನಡೆಯಲು ಮೂರು ವರ್ಷ ಅಧಿಕಾರಾವಧಿಯ 9 ಜನರ ಸಮಿತಿ ರಚನೆಗೆ ಮುಂದಾಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಸಮಿತಿ ಹೇಗೆ ರಚನೆಯಾಗುತ್ತೆ..?
ವ್ಯವಸ್ಥಾಪನಾ ಸಮಿತಿ ರಚನೆಯಲ್ಲಿ ಒಂದು ಎಸ್‍ಸಿ, ಎಸ್‍ಟಿ, ಪ್ರತಿನಿಧಿ, 1 ಮಹಿಳೆ, ದೇವಸ್ಥಾನದ ಅರ್ಚಕ ಸೇರಿದಂತೆ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದೆ. ಈ ಸಮಿತಿಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಧಾರ್ಮಿಕ ನ್ಯಾಯ ಸಮಿತಿಯ ಸದಸ್ಯರೊಳಗೊಂಡ ನಿರ್ದೇಶಿತ ಸದಸ್ಯರು ನೇರ ಸಂದರ್ಶನದಲ್ಲಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಈ ಸಮಿತಿಯು ದೇವಸ್ಥಾನದ ಆಡಳಿತ, ಅಭಿವೃದ್ಧಿ, ಕೆಲಸಗಾರರ ನೇಮಕ ಮುಂತಾದ ಅಧಿಕಾರವನ್ನು ಹೊಂದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 622 ಮುಜರಾಯಿ ದೇವಸ್ಥಾನಗಳಲ್ಲಿ 10 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ 113 ಸಿ ಮತ್ತು ಬಿ ಹಂತದ ಧಾರ್ಮಿಕ ಪರಿಷತ್ ಗೆ ಒಳಪಟ್ಟ ದೇವಸ್ಥಾನಗಳಿಗೆ 9 ಜನ ಸದಸ್ಯರಿರುವ ಸಮಿತಿಯನ್ನು ರಚಿಸುವ ಪ್ರಕ್ರಿಯೆಯಲ್ಲಿದೆ. ಇದರಲ್ಲಿ 30 ದೇವಸ್ಥಾನಗಳಿಗೆ ಸಮಿತಿ ಸದಸ್ಯತ್ವಕ್ಕಾಗಿ ಸಾರ್ವಜನಿಕರಿಂದ ಅರ್ಜಿ ಬಂದಿದ್ದು ಉಳಿದ 83 ದೇವಸ್ಥಾನಗಳಿಗೆ ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ. ಇನ್ನು ಬಿ ವರ್ಗದ 9 ದೇವಸ್ಥಾನಗಳಲ್ಲಿ 5 ದೇವಸ್ಥಾನಗಳಿಗೆ ಸಮಿತಿ ರಚಿಸಲಾಗಿದ್ದು ಉಳಿದ 4 ದೇವಸ್ಥಾನದ ಆಡಳಿತವರ್ಗ ಕೋರ್ಟ್ ಮೆಟ್ಟಿಲೇರಿದೆ.

ಪರ, ವಿರೋಧ ಯಾಕೆ..?
ದೇವಸ್ಥಾನಗಳಲ್ಲಿ ನಡೆಯುವ ಭ್ರಷ್ಟಾಚಾರ ತಡೆಯಲು ಈ ಸಮಿತಿ ರಚನೆಯಾಗಿದ್ದರೂ ಈ ಸಮಿತಿಯಲ್ಲಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಿಂದೂಗಳ ಧಾರ್ಮಿಕ ಹಕ್ಕಿಗೆ ತೊಂದರೆಯಾಗುತ್ತಿದ್ದು, ಸಮಿತಿ ರಚನೆಯಿಂದ ದೇವಸ್ಥಾನಕ್ಕೆ ಬರುವ ಹಣ ಕೂಡ ದುರುಪಯೋಗವಾಗಬಹುದು ಎಂಬುದು ಕೆಲವರ ವಾದವಾಗಿದೆ. ಜಿಲ್ಲೆಯ ಹಲವು ದೇವಸ್ಥಾನದಲ್ಲಿ ಈ ಹಿಂದೆ ವಂಶಪಾರಂಪರ್ಯವಾಗಿ ಆಡಳಿತ ಮಾಡುತ್ತಿದ್ದ ಕೆಲವರು ದೇವಸ್ಥಾನದ ಹಕ್ಕಿನ ಜಾಗವನ್ನೇ ಮಾರಿ ತಮ್ಮ ಸ್ವಂತಕ್ಕೆ ಬಳಸಿಕೊಂಡ ನಿದರ್ಶನಗಳಿದ್ದು ಇದನ್ನು ತಪ್ಪಿಸಲು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಇಂತಹ ಘಟನೆಗಳು ಜರುಗಿದ್ದರಿಂದಾಗಿ ತಕ್ಷಣದಲ್ಲಿ ಸಮಿತಿ ರಚಿಸಲು ಕ್ರಮ ಕೈಗೊಂಡಿದೆ. ಶೀಘ್ರದಲ್ಲಿ ಸಮಿತಿ ರಚಿಸುತ್ತಿರುವುದರಿಂದ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯದ ಮಹಾ ಮಂಡಲಿ ಬುಧವಾರ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಪ್ರತಿಭಟನಾ ಸಭೆ ನಡೆಸಿ ಮುಂದೆ ಕಾನೂನಿನ ಹೋರಾಟಕ್ಕೆ ಸಜ್ಜಾಗಿದೆ.

ವ್ಯವಸ್ಥಾಪನಾ ಸಮಿತಿ ರಚನೆಯಿಂದ ದೇವಾಲಯಗಳಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುವುದರ ಜೊತೆಗೆ ಹಿಂದು ಧಾರ್ಮಿಕ ಹಕ್ಕಿಗೆ ಚ್ಯುತಿ ಬರುತ್ತದೆ.
ಈಗಾಗಲೇ ಸುಪ್ರೀಂ ಕೋರ್ಟ ನಲ್ಲಿ ದಾವೆ ಇರುವುದರಿಂದ ಒಂದು ವೇಳೆ ಕೋರ್ಟ್ ಸರ್ಕಾರದ ಪರವಾಗಿ ಆದೇಶ ನೀಡಿದರೆ, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಗಳು ಮುಜರಾಯಿ ಕೈ ಸೇರುವುದರಲ್ಲಿ ಅನುಮಾನವಿಲ್ಲ ಎಂಬುದು ಧಾರ್ಮಿಕ ಮುಖಂಡರ ವಾದ. ಆದರೆ ಸರ್ಕಾರ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ ನೀಡಲು ಈ ಸಮಿತಿ ಅಗತ್ಯವಿದೆ ಎಂದು ಹೇಳಿದೆ.

Click to comment

Leave a Reply

Your email address will not be published. Required fields are marked *