– ನೇಪಾಳಕ್ಕೆ ಎಸ್ಕೇಪ್ ಆಗಲು ಪ್ಲ್ಯಾನ್ ಮಾಡಿದ್ದ ಆರೋಪಿ
ಲಕ್ನೋ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣ ಪ್ರಮುಖ ಆರೋಪಿ ಹಾಗೂ ಆರೋಪಿಗೆ ಆಶ್ರಯ ನೀಡಿದ್ದ ಇತರ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಿವಕುಮಾರ್ (Shivakumar) ಎಂದು ಗುರುತಿಸಲಾಗಿದೆ.
ಸಿದ್ದಿಕಿ ಹತ್ಯೆ ಬಳಿಕ ಪರಾರಿಯಾಗಿದ್ದ ಪ್ರಮುಖ ಆರೋಪಿ ನೇಪಾಳಕ್ಕೆ (Nepal) ಪಲಾಯನ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದ. ಅಷ್ಟರಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (UP STF) ಹಾಗೂ ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
ಅ.12 ರಂದು, ಬಾಂದ್ರಾದಲ್ಲಿರುವ ಪುತ್ರ ಶಾಸಕ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಸಿದ್ದಿಕಿ ಹತ್ಯೆಗೆ 9.9 ಎಂಎಂ ಪಿಸ್ತೂಲ್ ಬಳಸಲಾಗಿತ್ತು, ಒಟ್ಟು 6 ಸುತ್ತುಗಳಲ್ಲಿ ಗುಂಡು ಹಾರಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯುಪಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಭಾನುವಾರ ಪ್ರಮುಖ ಆರೋಪಿ ಹಾಗೂ ಆರೋಪಿ ನೇಪಾಳಕ್ಕೆ ಪರಾರಿಯಾಗಲು ಸಹಕರಿಸಿದ್ದ ಇತರ ನಾಲ್ವರನ್ನು ಬಂಧಿಸಲಾಗಿದೆ.
ಬಳಿಕ ವಿಚಾರಣೆ ವೇಳೆ ಆರೋಪಿ ಶಿವಕುಮಾರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಇದೆ. ಲಾರೆನ್ಸ್ ಬಿಷ್ಣೋಯ್‌ನ ಸಹೋದರ ಅನ್ಮೋಲ್ ಬಿಷ್ಣೋಯ್‌ನ ಸೂಚನೆಯ ಮೇರೆಗೆ ಕೊಲೆ ಮಾಡಲಾಗಿದೆ. ಲಾರೆನ್ಸ್‌ನ ಆಪ್ತ ಸಹಾಯಕನಾಗಿದ್ದ ಶುಭಂ ಲೋಂಕರ್ ಎಂಬುವವನು ಅನ್ಮೋಲ್ ಬಿಷ್ಣೋಯ್ ಜೊತೆಗೆ ಸಂಪರ್ಕ ಸಾಧಿಸಲು ಸಕರಿಸಿದ್ದ ಎಂಬುದಾಗಿಯೂ ಒಪ್ಪಿಕೊಂಡಿದ್ದಾನೆ. ಬಾಬಾ ಸಿದ್ದಿಕಿ ಹತ್ಯೆ ನಡೆದ ಒಂದು ದಿನದ ನಂತರ ಗ್ಯಾಂಗ್‌ನ ಸದಸ್ಯರೊಬ್ಬರು ಹತ್ಯೆ ಹೊಣೆ ಹೊತ್ತುಕೊಂಡಿದ್ದರು.
ಬಾಬಾ ಸಿದ್ದಿಕಿ ಹತ್ಯೆಯ ಆರೋಪಿಗಳಾದ ಮೂವರು ಶೂಟರ್‌ಗಳು ಮುಂಬೈನ ಕುರ್ಲಾ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಈ ವೇಳೆ ಯೂಟ್ಯೂಬ್‌ನಲ್ಲಿ ಟ್ಯುಟೋರಿಯಲ್ ವೀಡಿಯೊಗಳನ್ನು ನೋಡಿ ಬಂದೂಕುಗಳನ್ನು ಹೇಗೆ ಬಳಸಬೇಕೆಂದು ಕಲಿತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಆರೋಪಿಗಳು ಸುಮಾರು 4 ವಾರಗಳ ಕಾಲ ಅಂತಹ ವೀಡಿಯೊಗಳನ್ನು ವೀಕ್ಷಿಸಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿತ್ತು.