Wednesday, 18th July 2018

ವಂಚಕಿ ಪತ್ನಿಯಿಂದ ಕೆಲ್ಸ ಹೋಯ್ತು: ಈಗ ಮತ್ತೆ  CRPF ಉದ್ಯೋಗಕ್ಕಾಗಿ ಅಲೆದಾಟ

ಧಾರವಾಡ: ಸಿಆರ್‍ಪಿಎಫ್ ಯೋಧರೊಬ್ಬರು ಪತ್ನಿಯಿಂದಲೇ ತಮ್ಮ ನೌಕರಿ ಕಳೆದುಕೊಂಡು ನಿರ್ಗತಿಕರಾಗಿದ್ದು, ಈಗ ಮತ್ತೆ ಕೆಲಸಕ್ಕಾಗಿ ಅಲೆದಾಟ ನಡೆಸುತ್ತಿದ್ದಾರೆ.

ಜಿಲ್ಲೆಯ ಚೈತನ್ಯನಗರದ ರಾಜು ಕುಲಕರ್ಣಿ ಎಂಬವರು 2006 ರಲ್ಲಿ ನವಲಗುಂದ ತಾಲೂಕಿನ ಗುಡಿಸಾಗರದ ಗೀತಾ ಎಂಬುವವಳನ್ನ ಮದುವೆಯಾಗಿ ನಂತರ ಕ್ರೀಡಾ ಕೋಟಾದಲ್ಲಿ ಸಿಆರ್‍ಪಿಎಫ್ ಯೋಧರಾಗಿ ಸೇರ್ಪಡೆಯಾಗಿದ್ದರು.

ಪತ್ನಿ ಗೀತಾ ಎರಡು ವರ್ಷ ಸಂಸಾರ ಮಾಡಿದ ಮೇಲೆ ರಾಜುವಿನ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಳು. ಆರೋಪದ ಮೇರೆಗೆ ರಾಜು ಪೊಲೀಸರ ಬಂಧನಕ್ಕೆ ಒಳಗಾಗಿದ್ದರು. ಬಂಧನವಾದ ಹಿನ್ನೆಲೆಯಲ್ಲಿ ರಾಜು ಅವರು ನೌಕರಿಯನ್ನು ಕಳೆದುಕೊಂಡಿದ್ದರು.

ಈ ಮಧ್ಯೆ ಗೀತಾ ನಂತರ ಮತ್ತೇ 2012 ರಲ್ಲಿ ಪೊಲೀಸ್ ಅಧಿಕಾರಿ ರಾಜಶೇಖರ್ ಕುಲಕರ್ಣಿ ಜೊತೆ ಎರಡನೇ ಮದುವೆಯಾಗಿದ್ದಳು. ನಂತರ ಎರಡನೇ ಗಂಡನಿಂದಲೂ ವಿಚ್ಚೇದನ ಪಡೆದ ಗೀತಾ ಒಂದೇ ತಿಂಗಳಿನಲ್ಲಿ ದೆಹಲಿಯ ಉದ್ಯಮಿ ಹರ್ಷ ಜೈನ್ ಜೊತೆ ಮೂರನೇ ಮದುವೆ ಮಾಡಿಕೊಂಡಿದ್ದಾಳೆ. ಇಲ್ಲೂ ಕೂಡ ಹರ್ಷ ವಿರುದ್ಧ ಕೂಡ ವರದಕ್ಷಿಣೆ ಕೇಸ್ ಹಾಕಿ ಹಣ ಪಡೆದು ವಿಚ್ಚೇದನ ಪಡೆದುಕೊಂಡಿದ್ದಳು.

ಹಣಕ್ಕಾಗಿ ಮದುವೆಯಾಗಿ ವಿಚ್ಚೇದನ ಪಡೆಯುವ ಕೃತ್ಯ ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ರಾಜು ವರದಕ್ಷಿಣೆ ಕಿರುಕುಳದ ಪ್ರಕರಣದ ಆರೋಪದಿಂದ ಮುಕ್ತವಾಗಿ ಹೊರ ಬಂದಿದ್ದಾರೆ. ಆದರೆ ಈ ಪ್ರಕರಣದ ದಾಖಲಾದ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದ ರಾಜು ಮತ್ತೆ ನನಗೆ ಉದ್ಯೋಗ ಬೇಕೆಂದು ಮಾಧ್ಯಮಗಳಲ್ಲಿ ಮನವಿ ಮಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಎಸ್‍ಎಸ್‍ಎಲ್‍ಸಿ ಕ್ರೀಡಾ ಕೋಟಾದ ಮೇಲೆ ಆರ್ಮಿ ಸೇರಿದೆ. 2006 ರಲ್ಲಿ ಗೀತಾಳನ್ನು ಮದುವೆಯಾಗಿ ಆರ್ಮಿ ಕ್ವಾರ್ಟೆಸ್‍ಗೆ ಕರೆದುಕೊಂಡು ಹೋದೆ. ಆದರೆ ಅವಳು ಅಲ್ಲಿ ಸರಿಯಾಗಿ ಊಟ ಮಾಡಿ ಕೊಡುತ್ತಿರಲಿಲ್ಲ, ಮಾತನಾಡುತ್ತಿರಲಿಲ್ಲ. ಅವಳ ನಡವಳಿಕೆಯೇ ನನಗೆ ಇಷ್ಟ ಆಗಿಲ್ಲ. ನಂತರ ಹೆರಿಗೆಗೆ ಊರಿಗೆ ಕರೆದುಕೊಂಡು ಬಂದ ಅವಳನ್ನು ಬಿಟ್ಟು, ನಾನು ವಾಪಸ್ ಆರ್ಮಿಗೆ ಹೋಗಿದ್ದೆ ಎಂದರು.

ನಂತರ ಮುಂದುವರಿಸಿದ ಅವರು, ಆರ್ಮಿಯಲ್ಲಿ ಸಾಮೂಹಿಕ ವರ್ಗಾವಣೆ ಆಯಿತು. ಅಲ್ಲಿ ಹೆಂಡತಿಯನ್ನು ಜೊತೆಗೆ ಇರಿಸಿಕೊಳ್ಳಲು ಅವಕಾಶ ಇರಲಿಲ್ಲ. ಆದ್ದರಿಂದ ಆಕೆಯನ್ನು ಊರಿನಲ್ಲಿಯೇ ಬಿಟ್ಟು ಹೋದೆ. ಆದರೆ ಊರಿನಲ್ಲಿ ಏನೇನು ಮಾಡಿ ನಾನು ಇಲ್ಲದ ವೇಳೆ ವರದಕ್ಷಿಣೆ ಕೇಸ್ ಹಾಕಿದ್ದಾಳೆ. ಅದಕ್ಕಾಗಿ ಪೊಲೀಸರು ನನ್ನ ಅರೆಸ್ಟ್ ಮಾಡಿ 24 ಗಂಟೆ ಬಂಧನದಲ್ಲಿಟ್ಟಿದ್ದರು. ನಾನು ಎಷ್ಟು ಕೇಳಿಕೊಂಡರೂ ಬಿಡಲೇ ಇಲ್ಲ. ಇದರಿಂದ ನಾನು ಸರ್ಕಾರಿ ನೌಕರಿ ಕಳೆದುಕೊಂಡೆ. ಈಗ ಮತ್ತೆ ಸರ್ಕಾರಿ ನೌಕರಿ ಸಿಗುವುದಿಲ್ಲ. ಅವಳು 7 ತೊಲಾ ಬಂಗಾರ 36 ಸಾವಿರ ರೂ. ತೆಗೆದುಕೊಂಡು ಹೋಗಿದ್ದಾಳೆ. ಆದರೆ ನನಗೆ ಬಂಗಾರ ಬೇಡ ನೌಕರಿ ಬೇಕು ಕೊಡಿಸಿ ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *