ಮುಂಬೈ: ಒಂದು ಲಕ್ಷ ರೂ. ವಂಚನೆಯ ಪ್ರಕರಣದಲ್ಲಿ ಬಂಧಿಯಾಗಿ ನಂತರ ತಪ್ಪಿಸಿಕೊಂಡಿದ್ದ 54 ವರ್ಷದ ಆರೋಪಿಯನ್ನು ಬರೋಬ್ಬರಿ 15 ವರ್ಷಗಳ ನಂತರ ಸೋಮವಾರ ಮುಂಬೈಯ ಜುಹೂ ನಗರದಲ್ಲಿರುವ ಆತನ ಮನೆಯಲ್ಲಿ ಮತ್ತೆ ಬಂಧಿಸುವಲ್ಲಿ ಎರಡು ಪೊಲೀಸ್ ತಂಡ ಯಶಸ್ವಿಯಾಗಿದೆ.
ಆರೋಪಿಯ ಪತ್ನಿಯು ಅಝಾದ್ ಮೈದಾನ್ ಮತ್ತು ಜುಹೂ ಪೊಲೀಸರ ಬಳಿ ಮನೆಯಲ್ಲಿ ಪತಿ ಇಲ್ಲವೆಂದು ಮೂರು ಗಂಟೆಗಳ ಕಾಲ ವಾದ ಮಂಡಿಸಿದ್ದಾಳೆ. ಆದರೂ ಆತ ಮನೆಯಲ್ಲೇ ಅವಿತು ಕುಳಿತಿರಬಹುದು ಎನ್ನುವ ಬಲವಾದ ಶಂಕೆ ಹಿನ್ನೆಲೆಯಲ್ಲಿ ಎಲ್ಲ ಕೊಠಡಿ, ವಸ್ತುಗಳನ್ನು ಜಾಲಾಡಿ ಕೊನೆಗೆ ವಾಷಿಂಗ್ ಮಷೀನ್ ನಲ್ಲಿ ಅವಿತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
2002 ರಲ್ಲಿ ವಂಚನೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಕೋರ್ಟ್ ಆದೇಶಿಸಿತ್ತು. ಜೊತೆಗೆ ಪೊಲೀಸ್ ಆಯುಕ್ತರು ಕೂಡ ಹಳೆಯ ಕೇಸ್‍ಗಳ ಆರೋಪಿಗಳನ್ನು ಬಂಧಿಸಬೇಕು ಎಂದು ಆದೇಶಿಸಿದ್ದರು. ಬಳಿಕ ನಾವು ಆತನ ಮನೆಗೆ ಹೋಗಿ ಬಂಧಿಸಿದ್ದೇವೆ ಎಂದು ಅಝಾದ್ ಮೈದಾನ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ವಸಂತ್ ವಖಾರೆ ತಿಳಿಸಿದ್ದಾರೆ.
ಪುಣೆಯಲ್ಲೂ 1 ಕೋಟಿ ರೂ. ವಂಚನೆ ಮಾಡಿದ ಆರೋಪ ಈತನ ಮೇಲಿದೆ. ಮುಂಬೈ ನಗರದಲ್ಲಿ 2002 ರಲ್ಲಿ ಮೂವರಿಗೆ ಬಿಎಡ್ ಕೋರ್ಸ್ ಗೆ ಪ್ರವೇಶ ಪಡೆಯಲು ಸಹಕರಿಸುತ್ತೇನೆ ಎಂದು ಹೇಳಿ ಒಂದು ಲಕ್ಷ ರೂ. ತೆಗೆದುಕೊಂಡು ವಂಚನೆ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆರೋಪಿ ಪತ್ನಿ ಪೊಲೀಸರನ್ನು ಮೂರು ಗಂಟೆಯವರೆಗೆ ಬಿಡದೇ ನಂತರ ಹುಡುಕಲು ಅವಕಾಶ ಮಾಡಿಕೊಟ್ಟಿದ್ದಾಳೆ. ಬಳಿಕ ಪೊಲೀಸ್ ತಂಡ ಅಪಾರ್ಟ್ ಮೆಂಟ್ ಮೂರು ರೂಮ್‍ಗಳಲ್ಲೂ ಹುಡುಕಾಡಿದ್ದಾರೆ. ಎಲ್ಲೂ ಸಿಗದೇ ಇದ್ದಾಗ ಕೊನೆಗೆ ವಾಷಿಂಗ್ ಮಷೀನ್‍ನಲ್ಲಿ ಬಟ್ಟೆ ತೆಗೆಯುವಾಗ ಸಂದರ್ಭದಲ್ಲಿ ಆರೋಪಿ ಪತ್ತೆಯಾಗಿದ್ದಾನೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅವಕಾಶ ನೀಡದೇ ತಡೆದಿದ್ದಕ್ಕೆ ಆತನ ಪತ್ನಿಯ ವಿರುದ್ಧವೂ ದೂರು ದಾಖಲಿಸಿಕೊಂಡಿದ್ದಾರೆ.