ಭೋಪಾಲ್: ಮದುವೆಯಾಗು ಎಂದು ಕೇಳಿದ ಯುವತಿಯನ್ನು (Young Woman) ಮನಬಂದಂತೆ ಥಳಿಸಿದ ಯುವಕನ (Young Man) ಮನೆಯನ್ನು ಬುಲ್ಡೋಜರ್‌ನಿಂದ (Bulldozer) ಧ್ವಂಸಗೊಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.
19 ವರ್ಷದ ಯುವತಿಯನ್ನು ಆರೋಪಿ ಯುವಕ ಪಂಕಜ್ ತ್ರಿಪಾಠಿ (24) ಅಮಾನುಷವಾಗಿ ಥಳಿಸಿದ್ದ. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಶನಿವಾರ ತ್ರಿಪಾಠಿಯನ್ನು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬಂಧಿಸಲಾಗಿದೆ. ಇಂದು ಆರೋಪಿಯ ಮನೆಯನ್ನು ಕೆಡವಲು ಜಿಲ್ಲಾಡಳಿತ ಬುಲ್ಡೋಜರ್ ಅನ್ನು ಕಳುಹಿಸಿದೆ. ಪೊಲೀಸರ ಬೆಂಬಲದೊಂದಿಗೆ ಬುಲ್ಡೋಜರ್ ಮನೆಯನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವೀಡಿಯೋದಲ್ಲಿ ತ್ರಿಪಾಠಿ ಯುವತಿಗೆ ಮೊದಲು ಕಪಾಳಮೋಕ್ಷ ಮಾಡಿರುವುದು ಕಂಡುಬಂದಿದೆ. ಬಳಿಕ ಆಕೆಯ ತಲೆಕೂದಲನ್ನು ಹಿಡಿದು ನೆಲಕ್ಕೆ ಬಡಿದಿದ್ದಾನೆ. ನಂತರ ಆಕೆಯ ಮುಖ ಹಾಗೂ ದೇಹದ ಇತರ ಭಾಗಗಳಿಗೆ ಕಾಲಿನಿಂದ ನಿರ್ದಾಕ್ಷಿಣ್ಯವಾಗಿ ಒದ್ದಿದ್ದಾನೆ. ಈ ವೇಳೆ ಯುವತಿ ಪ್ರಜ್ಞಾಹೀನಳಾಗಿದ್ದಾಳೆ. ಇದನ್ನೂ ಓದಿ: ಕ್ರಿಕೆಟ್ ಆಡುವಾಗಲೇ ಚಾಕು ಇರಿತ – ಕುಂದಾನಗರಿಯಲ್ಲಿ ಡಬಲ್ ಮರ್ಡರ್
ಈ ಎಲ್ಲಾ ಕೃತ್ಯವನ್ನು ತ್ರಿಪಾಠಿಯ ಸ್ನೇಹಿತ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ. ವೀಡಿಯೋವನ್ನು ಅಳಿಸುವಂತೆ ತ್ರಿಪಾಠಿ ಕೇಳಿದ್ದು, ಈ ವೇಳೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದಲ್ಲಿ ಬಿದ್ದಿದ್ದ ಯುವತಿಯನ್ನು ಮೇಲೆತ್ತಲು ಪ್ರಯತ್ನಿಸಿದ್ದಾನೆ.
ಯುವತಿ ಬಳಿಕ ಗಂಟೆಗಟ್ಟಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ರೇವಾ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ವಿದ್ಯಾರ್ಥಿನಿಗೆ ಕಿಸ್ ಕೊಟ್ಟು ಯಾರಿಗೂ ಹೇಳ್ಬೇಡ ಎಂದ ಶಿಕ್ಷಕನ ವಿರುದ್ಧ ಕೇಸ್