ವಿಜಯಪುರ: ವಿವಾಹ ವಿಚ್ಛೇದನ (Divorce) ಪ್ರಕರಣಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬ ಕೋರ್ಟ್‍ಗೆ (Court) ಬಂದಿದ್ದ ವೇಳೆ ಆತನ ಪತ್ನಿಯ ಕುಟುಂಬಸ್ಥರು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮುದ್ದೇಬಿಹಾಳದಲ್ಲಿ (Muddebihal) ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮುದ್ದೇಬಿಹಾಳದ ರೂಢಗಿ ಗ್ರಾಮದ ಮಹೇಶ್ ಬಸಪ್ಪ ನಂದಿಹಾಳ ಎಂಬಾತ ತನ್ನ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಇದರ ಸಲುವಾಗಿ ವಿಚಾರಣೆಗಾಗಿ ಡಿ.20 ರಂದು ಆತ ಕೋರ್ಟಿಗೆ ಬಂದಿದ್ದ. ಈ ವೇಳೆ ಆತನನ್ನು ನ್ಯಾಯಾಲಯದ ಎದುರಿನ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಇಂಡಿಯಾ- ಪಾಕ್ ಗಡಿ ಸೀಮಾ ಹೈದರ್, ಉದ್ದ 5 ಅಡಿ 6 ಇಂಚು- ಉತ್ತರ ಪತ್ರಿಕೆ ಫುಲ್ ವೈರಲ್
ಕೋರ್ಟಿನ ಮೊದಲನೇ ಗೇಟ್‍ನ ಮುಂಭಾಗದಲ್ಲಿ ಮುತ್ತಪ್ಪ ಬಸಪ್ಪ ಬಿರಾದಾರ, ಬಸಪ್ಪ ಭೀಮಪ್ಪ ಬಿರಾದಾರ, ಚನ್ನಮ್ಮ ಬಸಪ್ಪ ಬಿರಾದಾರ, ಈರಮ್ಮ ಉರ್ಫ ಸುಮಿತ್ರಾ ಸೇರಿಕೊಂಡು ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಕೆಲವರು ತನ್ನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಮಹೇಶ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಹಲ್ಲೆಗೊಳಗಾದ ಮಹೇಶ್, ಈರಮ್ಮ ಉರ್ಫ ಸುಮಿತ್ರಾ ಎಂಬಾಕೆಯನ್ನು ಮದುವೆ ಆಗಿದ್ದ. ಮದುವೆಯ ಬಳಿಕ ಕೆಲವು ದಿನಗಳಲ್ಲೇ ಮಹಿಳೆ ಏಳು ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿ, ಮಹಿಳೆಯ ತವರು ಮನೆಯವರನ್ನು ಕರೆಸಿ ಆಕೆಯನ್ನು ಅವರೊಂದಿಗೆ ಕಳಿಸಿದ್ದ. ಬಳಿಕ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ.
ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಮುದ್ದೇಬಿಹಾಳ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಮೋದಿ ಓಡಾಡೋದು ಐಷಾರಾಮಿ ಫ್ಲೈಟ್ ಅಲ್ವಾ: ಸಿದ್ದರಾಮಯ್ಯ ಪ್ರಶ್ನೆ