ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೂಗಳತೆ ದೂರದಲ್ಲಿರುವ ನೆಲಮಂಗಲ ತಾಲೂಕಿನ ಹ್ಯಾಡಾಳು ಗ್ರಾಮದ ಬಳಿ ಕಳೆದ ರಾತ್ರಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, 108 ಅಂಬುಲೆನ್ಸ್ ಇಲ್ಲದೆ ಬಿಎಂಟಿಸಿ ಬಸ್ ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿದ್ದರಾಜು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ. ಗಾಯಾಳು ಸಿದ್ದರಾಜು ಕೆಎಸ್‍ಐಎಸ್‍ಎಫ್‍ನ ಪೊಲೀಸ್ ಪೇದೆಯಾಗಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗಿ ಬರುವಾಗ, ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಕಳೆದ ರಾತ್ರಿ ಸಿದ್ದರಾಜುಗೆ ಅಪಘಾತವಾಗಿ ಒಂದೂವರೆ ಗಂಟೆಯಾದರೂ ಸ್ಥಳಕ್ಕೆ 108 ಅಂಬ್ಯುಲೆನ್ಸ್ ಬರಲಿಲ್ಲ. ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಸಿದ್ದರಾಜು ನರಳಾಡುತ್ತಿದ್ದರೂ ಗಾಯಾಳು ನೆರವಿಗೆ ಸ್ಥಳೀಯರು ಬರಲಿಲ್ಲ. ಈ ಘಟನೆಯಲ್ಲಿ ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ.
ತಮ್ಮ ಬಿಎಂಟಿಸಿ ಬಸ್‍ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿದ್ದರಾಜು ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗಿ ಬರುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಯಿತು. ನಂತರ ಇದೇ ಮಾರ್ಗದಲ್ಲಿ ಬರುತ್ತಿದ್ದ ನೆಲಮಂಗಲ ಟು ಯಲಹಂಕ ಮಾರ್ಗದ ಬಸ್ ಬರುತ್ತಿದ್ದು, ಚಾಲಕ ಗಂಗಾಧರ್ ಹಾಗೂ ನಿರ್ವಾಹಕ ಶ್ರೀನಿವಾಸ್ ಅವರು ಸಿದ್ದರಾಜುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಸ್ ನೆಲಮಂಗಲದ ಶಿವನಪುರ ಬಿಎಂಟಿಸಿ ಡಿಪ್ಪೋಗೆ ಸೇರಿದ್ದಾಗಿದೆ.
ಸದ್ಯ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv