ಘಜಿಯಾಬಾದ್: 4 ವರ್ಷದ ಮಗುವಿನ ತಾಯಿಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ 28 ವರ್ಷದ ಯುವಕನೊಬ್ಬ ಆಕೆಯ ಕಂದನನ್ನು ಅಪಹರಣ ಮಾಡಿರುವ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್ ನಗರದಲ್ಲಿ ನಡೆದಿದೆ.
28 ವರ್ಷದ ಮೌನು ತ್ಯಾಗಿ ಮಗುವನ್ನು ಅಪಹರಣ ಮಾಡಿದ್ದ ಆರೋಪಿ. ಸದ್ಯ ಆರೋಪಿ ಅಪಹರಣ ಮಾಡಿದ್ದ ಮಗುವನ್ನು ದೆಹಲಿಯಿಂದ ಸಹರಾನ್ಪುರ್ ಮಾರ್ಗವಾಗಿ ಬಸ್ಸಿನಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ.
Advertisement
ಆರೋಪಿ ಮೌನು ತ್ಯಾಗಿ ಕೂಲಿ ಕಾರ್ಮಿಕನಾಗಿದ್ದು, ಮಹಿಳೆ ವಾಸಿಸುತ್ತಿದ್ದ ಮನೆಯ ಬಳಿಯೇ ವಾಸಿಸುತ್ತಿದ್ದ. ಅಲ್ಲದೇ ಕಳೆದ ಒಂದು ವರ್ಷದಿಂದ ಮಹಿಳೆಗೂ ಪರಿಚಯವಿದ್ದ. ಆದರೆ ಜುಲೈ 24 ರಂದು ಮಗು ಶಾಲೆಗೆ ತೆರಳಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ತ್ಯಾಗಿ ಅಪಹರಣ ಮಾಡಿದ್ದ. ಮಗು ಕಾಣೆಯಾದ ಬಗ್ಗೆ 25 ರಂದು ಮಹಿಳೆ ದೂರು ದಾಖಲಿಸಿದ್ದರು.
Advertisement
Advertisement
ಅಂದಹಾಗೇ ಕುಡಿತದ ದಾಸನಾಗಿದ್ದ ಪತಿಯನ್ನು ತೊರೆದಿದ್ದ ಮಹಿಳೆ ಕಳೆದ ಕೆಲ ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದರು. ಇದನ್ನೇ ಅನುಕೂಲ ಮಾಡಿಕೊಂಡ ತ್ಯಾಗಿ ತನ್ನೊಂದಿಗೆ ಮದುವೆಯಾಗುವಂತೆ ಮಹಿಳೆಗೆ ಒತ್ತಾಯ ಮಾಡಿದ್ದ. ಆದರೆ ಈಗಾಗಲೇ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಮೌನು ತ್ಯಾಗಿಯನ್ನು ಮದುವೆಯಾಗಲು ಮಹಿಳೆ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಆರೋಪಿ ಮಗುವನ್ನು ಅಪಹರಣ ಮಾಡಿದ್ದ.
Advertisement
ಮೌನು ತ್ಯಾಗಿ ಹಲವು ದಿನಗಳಿಂದ ಕುಟುಂಬಕ್ಕೆ ಪರಿಚಯವಿದ್ದ ಕಾರಣ ಮಗು ಸಹ ಆತ ಕರೆದ ತಕ್ಷಣ ಜೊತೆ ತೆರಳಿದೆ. ಮಗುವನ್ನು ಕರೆದುಕೊಂಡ ಆರೋಪಿ ಮೊದಲು ಮೀರತ್ ಗೆ ತೆರಳಿದ್ದು, ಬಳಿಕ ಮಗುವಿನ ತಾಯಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಅಲ್ಲದೇ ತನ್ನನ್ನು ಮದುವೆಯಾಗದಿದ್ದರೆ ಮಗುವನ್ನು ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ. ಈ ವೇಳೆ ಆತಂಕಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ಕುರಿತು ದೂರು ಪಡೆದ ಪೊಲೀಸರು ಆರೋಪಿಯ ಫೋನ್ ಮಾಹಿತಿ ಪಡೆದು ಆತ ಇರುವ ಸ್ಥಳವನ್ನು ಪತ್ತೆಮಾಡಿ ಮಗುವನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ. ಅಲ್ಲದೇ ಆರೋಪಿ ಶಾಲೆಯ ಬಳಿಯಿಂದ ಮಗುವನ್ನು ಅಪಹರಣ ಮಾಡಲು ಬಳಕೆ ಮಾಡಿದ್ದ ಬೈಕನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆತನ ವಿರುದ್ಧ ಅಪಹರಣ ದೂರಿನ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.