ಲಕ್ನೋ: ರೈಲು ನಿಲ್ದಾಣಗಳಲ್ಲಿ ಒಂದು ಪ್ಲಾಟ್‍ಫಾರ್ಮ್‍ನಿಂದ ಮತ್ತೊಂದಕ್ಕೆ ಹೋಗಲು ಬ್ರಿಡ್ಜ್ ಇರುತ್ತೆ. ಆದರೂ ಕೆಲವರು ಅವಸರದಲ್ಲಿ ಟ್ರ್ಯಾಕ್ ಮೇಲೆಯೇ ನಡೆದುಕೊಂಡು ಹೋಗಿ ದಾಟಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಟ್ರ್ಯಾಕ್ ಮೇಲೆ ರೈಲು ನಿಂತಿದ್ದರೆ ಅದರ ಕೆಳಗೆ ನುಸುಳಿ ಮತ್ತೊಂದು ಬದಿಗೆ ಹೋಗೋದನ್ನ ನೋಡಿರ್ತೀವಿ. ಹಾಗೊಂದು ವೇಳೆ ನುಗ್ಗುವಾಗ ರೈಲು ಚಲಿಸಲು ಆರಂಭಿಸಿದ್ರೆ ಹೇಗಾಗಬೇಡ? ಇಂತಹದ್ದೇ ಒಂದು ಘಟನೆ ನಡೆದಿದ್ದು, ಅದೃಷ್ಟವಶಾತ್ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯ ಬಂಕಾಟಾ ರೈಲ್ವೆ ನಿಲ್ದಾಣದಲ್ಲಿ ನವೆಂಬರ್ 15ರಂದು ಈ ಘಟನೆ ನಡೆದಿದೆ. ಟ್ರ್ಯಾಕ್ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ರೈಲು ಹಾದು ಹೋದರೂ ಅವರಿಗೆ ಸಣ್ಣ ಪುಟ್ಟ ಗಾಯಗಳೂ ಕೂಡ ಆಗಿಲ್ಲ.
Advertisement
Advertisement
ನಡೆದಿದ್ದೇನು?: ವ್ಯಕ್ತಿಯೊಬ್ಬರು ರೈಲು ಹಿಡಿಯಲು ಮತ್ತೊಂದು ಪ್ಲಾಟ್‍ಫಾರ್ಮ್‍ಗೆ ಹೋಗಬೇಕಿತ್ತು. ಅವರು ಫುಟ್ ಓವರ್ ಬ್ರಿಡ್ಜ್ ಬದಲು ಟ್ರ್ಯಾಕ್ ಮೇಲೆ ನಿಂತಿದ್ದ ಗೂಡ್ಸ್ ರೈಲಿನ ಕೆಳಗೆ ನುಸುಳಿದ್ದರು. ಆ ವ್ಯಕ್ತಿ ರೈಲಿನ ಕೆಳಗೆ ನುಗ್ಗುತ್ತಿದ್ದಂತೆ ರೈಲು ಚಲಿಸಲು ಆರಂಭಿಸಿತ್ತು.
Advertisement
ಮುಂದಾಗೋ ಪರಿಣಾಮದ ಅರಿವಾಗಿ ಆ ವ್ಯಕ್ತಿ ಟ್ರ್ಯಾಕ್ ಮೇಲೆಯೇ ಮಲಗಿಕೊಂಡ್ರು. ರೈಲು ತನ್ನ ಪಾಡಿಗೆ ಟ್ರ್ಯಾಕ್ ಮೇಲೆ ಹಾದು ಹೋಯ್ತು. ರೈಲು ನಿಲ್ದಾಣದಿಂದ ಹೊರಟ ನಂತರ ಆ ವ್ಯಕ್ತಿ, ಬದುಕಿದೆ ಬಡ ಜೀವ ಅಂತ ನಿಟ್ಟುಸಿರು ಬಿಟ್ರು. ಈ ಎಲ್ಲಾ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.
ಒಂದು ವೇಳೆ ಅವರು ಗಾಬರಿಯಿಂದ ಅತ್ತಿತ್ತ ಓಡಾಡಿದ್ರೆ ಅಥವಾ ತಲೆಯನ್ನ ಮೇಲೆ ಎತ್ತಿದ್ರೆ ಅನಾಹುತಾವಾಗುತಿತ್ತು. ಆದ್ರೆ ಟ್ರ್ಯಾಕ್ ಮೇಲೆ ಉದ್ದಕ್ಕೆ ಮಲಗಿಕೊಂಡಿದ್ರಿಂದ ಯಾವುದೇ ಸಣ್ಣ ಪುಟ್ಟ ಗಾಯಗಳೂ ಕೂಡ ಆಗದೆ ಬಚಾವಾದ್ರು.
ಆದ್ರೆ ಎಲ್ಲರಿಗೂ ಇದೇ ರೀತಿ ಆಗುತ್ತೆ ಅಂತ ಹೇಳೋಕಾಗಲ್ಲ. ಆದ್ದರಿಂದ ಟ್ರ್ಯಾಕ್ ದಾಟೋ ಬದಲು ಬ್ರಿಡ್ಜ್ ಬಳಸೋದು ಸೂಕ್ತ.