ಚಾಮರಾಜನಗರ: ಡಿಸ್ಕವರಿ ಚಾನೆಲ್‍ನಲ್ಲಿ ಪ್ರಸಾರವಾಗುವ ಜನಪ್ರಿಯ ಶೋ ‘ಮ್ಯಾನ್ ವರ್ಸಸ್ ವೈಲ್ಡ್’ನಲ್ಲಿ ಬಂಡೀಪುರದಲ್ಲಿ ಚಿತ್ರೀಕರಣಗೊಂಡ ಸೂಪರ್ ಸ್ಟಾರ್ ರಜನಿಕಾಂತ್‍ರ ವಿಶೇಷ ಸಂಚಿಕೆಯ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ನಲ್ಲಿ ಅರಣ್ಯದಲ್ಲಿ ಹುಲಿ ಘರ್ಜನೆಯ ನಡುವೆ ತಲೈವಾರ ನಗು ಕಂಡು ಅಭಿಮಾನಿಗಳು ಖುಷ್ ಆಗಿದ್ದಾರೆ.
ರಜನಿಕಾಂತ್ ಅವರು ಬೇರ್ ಗ್ರಿಲ್ಸ್ ಜೊತೆ ಬಂಡೀಪುರದ ಅರಣ್ಯದಲ್ಲಿ ‘ಮ್ಯಾನ್ ವರ್ಸಸ್ ವೈಲ್ಡ್’ನ ವಿಶೇಷ ಸಂಚಿಕೆಯ ಚಿತ್ರೀಕರಣ ನಡೆಯುತ್ತಿದ್ದ ವಿಚಾರವೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಆದರೆ ಈಗ ಮ್ಯಾನ್ ವರ್ಸಸ್ ವೈಲ್ಡ್‌ನ ರಜನಿಕಾಂತ್‍ರ ವಿಶೇಷ ಸಂಚಿಕೆಯ ಟೀಸರ್ ನಲ್ಲಿ ಹುಲಿ ಘರ್ಜನೆ ನಡುವೆ ತಲೈವಾರ ನಗು ಅಭಿಮಾನಿಗಳ ಗಮನ ಸೆಳೆದಿದೆ.
Gear up to venture into the wilderness of India with survival expert @BearGrylls and the ultimate superstar @Rajinikanth in an action packed adventure. Premieres 23 March at 8 PM, only on Discovery #ThalaivaOnDiscovery pic.twitter.com/zSS4GsSCL4
— Discovery Channel India (@DiscoveryIN) February 27, 2020
ಈ ವಿಶೇಷ ಸಂಚಿಕೆಯ 40 ಸೆಕೆಂಡ್‍ಗಳ ಟೀಸರ್ ನಲ್ಲಿ ಬುಲೆಟ್ ಏರಿ ಬರುವ ಸಾಹಸಿಗ ಬೇರ್ ಗ್ರಿಲ್ಸ್ ಹಾಗೂ ಹುಲಿ ಘರ್ಜನೆ ಮತ್ತು ರಜಿನಿಯ ನಗುವಿದ್ದು ಸಾಕಷ್ಟು ಕೂತೂಹಲ ಕೆರಳಿಸಿದೆ. ಜೊತೆಗೆ ಮಾರ್ಚ್ 23ರ ರಾತ್ರಿ 8ಕ್ಕೆ ವಿಶೇಷ ಸಂಚಿಕೆ ಪ್ರಸಾರಗೊಳ್ಳಲಿದೆ ಎಂದು ಡಿಸ್ಕವರಿ ಚಾನೆಲ್ ಅಧಿಕೃತ ಟ್ವಿಟರ್ ಅಕೌಂಟ್‍ನಲ್ಲಿ ತಿಳಿಸಲಾಗಿದೆ. ಟೀಸರ್ ನಲ್ಲಿ ರಜಿನಿಯವರ ಮುಖ ತೋರಿಸದೇ ಅವರ ನಗುವಿನ ಶಬ್ಧವನ್ನು ಬಳಸಿಕೊಂಡಿರುವುದು ತಲೈವಾ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ.
ಕಾರ್ಯಕ್ರಮದ ನಿರ್ದೇಶಕ ಬೇರ್ ಗ್ರಿಲ್ಸ್ ನೇತೃತ್ವದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರ ಮ್ಯಾನ್ ವರ್ಸಸ್ ವೈಲ್ಡ್‌ನ ವಿಶೇಷ ಸಂಚಿಕೆಯ ಶೂಟಿಂಗ್ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿತ್ತು. ಜನವರಿ 27 ರಿಂದ ಜನವರಿ 29 ರವರೆಗೆ ಅರಣ್ಯ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಈ ವಿಶೇಷ ಸಂಚಿಕೆಯ ಶೂಟಿಂಗ್ ನಡೆದಿತ್ತು. ಮೂರು ದಿನಗಳ ಕಾಲ ನಡೆದಿದ್ದ ಶೂಟಿಂಗ್‍ಗೆ ಅನುಮತಿ ನೀಡಲು ಅರಣ್ಯ ಇಲಾಖೆಯಿಂದ 17 ಕಂಡೀಷನ್ ವಿಧಿಸಲಾಗಿತ್ತು. ಶಬ್ದಮಾಲಿನ್ಯ, ವಾಯುಮಾಲಿನ್ಯ, ಬೆಂಕಿ ಅನಾಹುತ ನಡೆಯದಂತೆ ನೋಡಿಕೊಳ್ಳುವ 17 ಕಂಡೀಷನ್ ವಿಧಿಸಿ ಅನುಮತಿ ನೀಡಲಾಗಿತ್ತು.
ಮೂಳೆಹೊಲೆ ಅರಣ್ಯ ವಲಯದಲ್ಲಿ ರಜನಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಗುಡ್ಡದಿಂದ ಹತ್ತಿ ಜಾರುವ ದೃಶ್ಯವೊಂದಿತ್ತು. ಆ ವೇಳೆ ನೆಲಕ್ಕೆ ಕೈ ಊರಿದಾಗ ಲಂಟಾನ ಮುಳ್ಳು ತರಚಿ ರಜನಿ ಗಾಯಮಾಡಿಕೊಂಡಿದ್ದರು. ಚಿತ್ರೀಕರಣದ ವೇಳೆ ಬಂಡೀಪುರ ಕಾಡನ್ನು ಕಂಡು ಫಿದಾ ಆಗಿದ್ದ ತಲೈವಾ, ಈ ರೀತಿಯ ಕಾಡನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಈ ಕುರಿತು ನಾನೊಂದು ಸಂದೇಶವನ್ನು ನೀಡುತ್ತೇನೆ ಎಂದು ಹೇಳಿದ್ದರು.