– ಇನ್ನೂ 40 ಲಕ್ಷ ಲೋನ್ ಬಾಕಿ ಇತ್ತು
ನವದೆಹಲಿ: ಮೂತ್ರವಿಸರ್ಜನೆ ಮಾಡಲೆಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ ದುಬಾರಿ ಬೆಲೆಯ ಕಾರನ್ನೇ ಖದೀಮರು ಹೊತ್ತೊಯ್ದ ಘಟನೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಈ ಘಟನೆ ಶನಿವಾರ ರಾತ್ರಿ ನಡೆದಿದೆ. ರಿಷಬ್ ಅರೋರ ಎಂಬ ವ್ಯಾಪಾರಿ ಪಾರ್ಟಿ ಮುಗಿಸಿ ಮದ್ಯದ ಅಮಲಿನಲ್ಲಿ ತನ್ನ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದನು. ಈ ಸಂದರ್ಭದಲ್ಲಿ ಆತನಿಗೆ ದಾರಿ ಮಧ್ಯೆ ಸೂಸು ಬಂದಿದೆ. ಹೀಗಾಗಿ ಕೀ ಬಿಟ್ಟು ತನ್ನ ಕಾರನ್ನು ಸೈಡಿಗೆ ಹಾಕಿ ಹೋಗಿದ್ದಾನೆ.
ದುಬಾರಿ ಕಾರನ್ನು ದರೋಡೆ ಮಾಡಿದ ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಲು ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ಕೇಂದ್ರ ನೊಯ್ಡಾದ ಪೊಲೀಸ್ ಆಯುಕ್ತ ಹರೀಶ್ ಚಂದರ್ ತಿಳಿಸಿದ್ದಾರೆ.
ಅರೋರಾ ದಾರಿ ಮಧ್ಯೆ ಕಾರು ನಿಲ್ಲಿಸಿ ಮೂತ್ರವಿಸರ್ಜನೆ ಮಾಡಲು ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲೇ ಇದ್ದ ಖದೀಮರು ಕಾರನ್ನು ಎಗರಿಸಿದ್ದಾರೆ. ಅಲ್ಲದೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಚಂದರ್ ವಿವರಿಸಿದ್ದಾರೆ.
ಇದೊಂದು ಯೋಜಿತ ಕೃತ್ಯವಾಗಿದೆ. ಕಾರು ಮಾಲೀಕನಿಗೆ ಗೊತ್ತಿರುವವರೇ ಕಳ್ಳತನ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುವುದಾಗಿ ಡಿಸಿಪಿ ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಸಂಬಂಧ ದುಷ್ಕರ್ಮಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಕಾರನ್ನು ಆದಷ್ಟು ಬೇಗ ಚಾಲಕನಿಗೆ ಒಪ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಕುಡಿದು ಚಾಲನೆ ಮಾಡಿದ್ದಕ್ಕಾಗಿ ಚಾಲಕನ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ತಿಳಿಸಿದ್ದಾರೆ.
ಬೈಕಿನಲ್ಲಿ ಬಂದ ಖದೀಮರು ಈ ಕೃತ್ಯ ಎಸಗಿದ್ದಾರೆ. ಅಲ್ಲದೆ ಅವರು ಹಿಂಬದಿಯಿಂದ ಬಂದು ಗನ್ ಇಟ್ಟು ತನಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಅರೋರಾ ಆರೋಪಿಸಿದ್ದಾನೆ.
ಈ ದುಬಾರಿ ಕಾರು ರಿಷಬ್ ಬಾವನಾದಾಗಿದ್ದು, ಲೋನ್ ಮಾಡಿ ಕಾರು ಖರೀದಿಸಿದ್ದರು. ಅಲ್ಲದೆ ಕಾರಿನ ಇನ್ನೂ 40 ಲಕ್ಷ ಲೋನ್ ಕಟ್ಟಲು ಬಾಕಿಯಿತ್ತು.