ವಾಷಿಂಗ್ಟನ್: ವ್ಯಕ್ತಿಯೊಬ್ಬ ಜೇಡವನ್ನು ಕೊಲ್ಲಲು ಹೋಗಿ ಕೊನೆಗೆ ತನ್ನ ಮನೆಯನ್ನೇ ಸುಟ್ಟುಕೊಂಡು ಎಡವಟ್ಟು ಮಾಡಿಕೊಂಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಭಾನುವಾರ ಅಮೆರಿಕದ ಉತ್ತರ ಕ್ಯಾಲಿಫೋನಿರ್ಯಾದ ರೆಡಿಂಗ್ ನಲ್ಲಿರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ಜೇಡಕ್ಕೆ ಬೆಂಕಿ ನೀಡಿ ಕೊಲ್ಲಲು ಯತ್ನಿಸಿದ್ದಾಗ ನನ್ನ ಮನೆ ಕೂಡ ಬೆಂಕಿಗೆ ಆಹುತಿಯಾಗಿದೆ ಎಂದು ನಿವಾಸಿ ಲಿಂಡ್ಸೆ ವಿಸ್ಗರ್ವರ್ ತಿಳಿಸಿದ್ದಾರೆ.
ದೊಡ್ಡ ಗಾತ್ರದಲ್ಲಿದ್ದ ಜೇಡವನ್ನು ಕೊಲ್ಲಲು ಹೋದಾಗ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಗೆ ಕಾರಣವೇನು ಹಾಗೂ ಅದರಿಂದ ಮನೆಗೆ ಹೇಗೆ ವ್ಯಾಪಿಸಿತು ಎನ್ನುವುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಜೇಡದ ಬಗ್ಗೆ ಇರುವ ಮಾಹಿತಿಯೂ ತನಿಖೆಯ ಒಂದು ಭಾಗ ಎಂದು ರೆಡಿಂಗ್ ಅಗ್ನಿಶಾಮಕ ದಳದ ಮುಖ್ಯಸ್ಥ ಹೇಳಿದ್ದಾರೆ.
ಬೆಂಕಿಯಲ್ಲಿ ಉರಿಯುತ್ತಿದ್ದ ಜೇಡ ತಕ್ಷಣ ಹಾಸಿಗೆಯ ಮೇಲೆ ಬಿತ್ತು. ಹಾಸಿಗೆಗೆ ಬೆಂಕಿ ಬಿದ್ದ ಬಳಿಕ ಕೊಠಡಿಗೆ ವ್ಯಾಪಿಸಿ ನಂತರ ಕೆನ್ನಾಲಿಗೆ ಮನೆಗೆ ವ್ಯಾಪಿಸಿತ್ತು. ಕೂಡಲೇ ಬೆಂಕಿಯನ್ನು ನಂದಿಸಲು ಅಲ್ಲಿದ್ದ ಸ್ಥಳೀಯರು ಹರಸಾಹಸಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.
ಅಗ್ನಿ ಅವಘಡದಿಂದ ಅಂದಾಜು 11 ಸಾವಿರ ಡಾಲರ್(ಅಂದಾಜು 7 ಲಕ್ಷ ರೂ.) ನಷ್ಟವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 20 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.