ಹಾಸನ: ಮ್ಯಾಟ್ರಿಮೊನಿಯಲ್ಲಿ ಪ್ರೋಫೈಲ್ ಅಪ್ಲೋಡ್ ಮಾಡಿದ್ದ ಯುವತಿಯನ್ನು ಭೇಟಿ ಮಾಡಿ ಮದುವೆಯಾಗುವುದಾಗಿ ನಂಬಿಸಿದ ಅಸಾಮಿಯೊಬ್ಬ ಆಕೆಯನ್ನು ಮಾತಾಡಿಸಿ 10 ಗ್ರಾಂ ಚಿನ್ನದ ಸರ ಮತ್ತು 8 ಸಾವಿರ ನಗದು ಪಡೆದು ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅರಕಲಗೂಡು ಸರ್ಕಾರಿ ಕಾಲೇಜು ಅತಿಥಿ ಉಪನ್ಯಾಸಕಿ ಮೋಸ ಹೋದಾಕೆ. ವರ ಬೇಕು ಎಂದು ಉಪನ್ಯಾಸಕಿ 4 ವರ್ಷಗಳ ಹಿಂದೆ ಮ್ಯಾಟ್ರಿಮೊನಿಗೆ ತನ್ನ ಪ್ರೋಫೈಲ್ ಸಹಿತ ಅಪ್ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ಮಂಜುನಾಥ್ ಎಂಬಾತ ಕೆಲ ದಿನಗಳ ಹಿಂದೆ ಉಪನ್ಯಾಸಕಿಗೆ ಕರೆ ಮಾಡಿದ್ದಾನೆ.
Advertisement
ಜೂನ್ 17ರಂದು ಹಾಸನಕ್ಕೆ ಬಂದು ನಾನು ಸಚಿವ ಡಿ.ಕೆ.ಶಿವಕುಮಾರ್ ಊರಿನವರು. ಅವರ ಪಕ್ಕದಲ್ಲೇ ನನ್ನ ಮನೆ ಇದೆ. ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಬರೋಬ್ಬರಿ 1.70 ಲಕ್ಷ ಸಂಬಳ ಪಡೆಯುತ್ತೇನೆ ಎಂದು ಹೇಳಿಕೊಂಡಿದ್ದಾನೆ. ನಂತರ ಕಾರಿನಲ್ಲಿ ಹಾಸನದಿಂದ ಸಕಲೇಶಪುರ ತಾಲೂಕು ಬಾಳ್ಳು ಪೇಟೆವರೆಗೂ ಕರೆದುಕೊಂಡು ಹೋಗಿದ್ದಾನೆ.
Advertisement
Advertisement
ಈ ವೇಳೆ ನಿನ್ನ ಪ್ರೀತಿಯ ಗಿಫ್ಟ್ ಆಗಿ ಕತ್ತಲ್ಲಿರುವ ಚಿನ್ನದ ಸರ ಕೊಡು ಎಂದು ಯಾಮಾರಿಸಿದ್ದಾನೆ. ನನಗೆ ಸುಂದರವಾದ ಹುಡುಗಿ ಬೇಡ, ಗುಣವಂತೆ ಸಾಕು ಎಂದೆಲ್ಲಾ ನೈಸ್ ಮಾಡಿದ್ದಾನೆ. ಎಟಿಎಂ ನಲ್ಲಿ ಎಷ್ಟು ಹಣ ಇದೆ ಎಂದು ಕೇಳಿ ಎಟಿಎಂ ಪಡೆದು ಇದ್ದ 8 ಸಾವಿರ ಹಣವನ್ನೂ ಎಗರಿಸಿದ್ದಾನೆ.
Advertisement
ನಂತರ ನಾಳೆಯೇ ಅಮ್ಮನೊಂದಿಗೆ ಬರುತ್ತೇನೆ. ಆದಷ್ಟು ಬೇಗ ಮದುವೆಯಾಗೋಣ. ನನ್ನ ಬಳಿ 1 ಕೆಜಿ ಚಿನ್ನ ಇದೆ. ನಿನ್ನನ್ನು ರಾಣಿ ತರ ನೋಡಿಕೊಳ್ಳುತ್ತೇನೆ ಎಂದವನು ಈವರೆಗೂ ಪತ್ತೆಯಿಲ್ಲ. ಕಾಲ್ ಮಾಡಿದ್ರೆ ರಿಸೀವ್ ಮಾಡಲ್ಲ. ಆತ ನನ್ನನ್ನು ಮದುವೆಯಾಗದೇ ಇದ್ದರೂ ಪರವಾಗಿಲ್ಲ. ನನ್ನ ವಸ್ತುಗಳನ್ನು ನನಗೆ ಕೊಡಿಸಿ. ನನ್ನಂಥ ಮೋಸ ಯಾರಿಗೂ ಆಗಬಾರದು ಎಂದು ಉಪನ್ಯಾಸಕಿ ಇದೀಗ ಕಣ್ಣೀರಿಡುತ್ತಿದ್ದಾರೆ.
ಸದ್ಯ ಮೋಸ ಹೋದ ಉಪನ್ಯಾಸಕಿ ಹಾಸನ ಮಹಿಳಾ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ.