ತಿರುವನಂತಪುರಂ: ಕಳ್ಳತನ ಆರೋಪದಡಿ ವ್ಯಕ್ತಿಯನ್ನು ಕಟ್ಟಿ ಹಾಕಿ ಥಳಿಸಿ, ಆತನೊಂದಿಗೆ ಸೆಲ್ಫಿ ತೆಗೆದುಕೊಂಡ ಘಟನೆ ಕೇರಳದ ಪಲ್ಕಾಡ್ ನಲ್ಲಿ ನಡೆದಿದೆ. ಘಟನೆಯಲ್ಲಿ ಸಾರ್ವಜನಿಕರಿಂದ ಥಳಿತಕ್ಕೆ ಒಳಗಾದ ವ್ಯಕ್ತಿ ಸಾವನ್ನಪ್ಪಿದ್ದು, ಈ ಕುರಿತು ಪೊಲೀಸರು ದೂರು ದಾಖಲಿಕೊಂಡಿದ್ದಾರೆ.
ಕಳ್ಳತನ ಆರೋಪ ಹೊತ್ತ ವ್ಯಕ್ತಿ 27 ವರ್ಷದ ಅಧಿವಾಸಿಯಾಗಿದ್ದು, ಮೃತ ವ್ಯಕ್ತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
Advertisement
Advertisement
ಮೃತ ವ್ಯಕ್ತಿ ಸ್ಥಳೀಯ ಅಂಗಡಿಯಲ್ಲಿ ಆಹಾರ ಪದಾರ್ಥವನ್ನು ಕಳ್ಳತನ ಮಾಡುತ್ತಿದ್ದ ಎಂದು ಸ್ಥಳೀಯರು ಆತನನ್ನು ಹಿಡಿದು ಕಟ್ಟಿ ಹಾಕಿ ಥಳಿಸಿದ್ದರು. ಅಲ್ಲದೇ ಅದನ್ನು ವಿಡಿಯೋ ಮಾಡಿ, ಆತನೊಂದಿಗೆ ಸೆಲ್ಫಿ ಸಹ ತೆಗೆದುಕೊಂಡಿದ್ದರು. ಬಳಿಕ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಆದರೆ ಆತ ದಾರಿ ನಡುವೆಯೇ ಪೊಲೀಸ್ ವಾಹನದಲ್ಲಿ ಮೃತಪಟ್ಟಿದ್ದಾನೆ. ಪ್ರಸ್ತುತ ಘಟನೆ ಕುರಿತು ಪೊಲೀಸರು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಘಟನೆಯ ಸಂಬಂಧ 7 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
ಕಳೆದ ಕೆಲ ದಿನಗಳಲ್ಲಿ ಕೇರಳದಲ್ಲಿ ಇಂತಹ ಘಟನೆಗಳು ಹೆಚ್ಚು ಮರುಕಳಿಸುತ್ತಿವೆ. ಒಂದು ತಿಂಗಳಿನಲ್ಲಿ ಸಾರ್ವಜನಿಕರು ಥಳಿಸುತ್ತಿರುವ ನಾಲ್ಕನೇ ಘಟನೆಯಾಗಿದೆ. ಕೆಲ ದಿನಗಳ ಹಿಂದೆ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಪಲ್ಲಿಪುರಂ ಪ್ರದೇಶದಲ್ಲಿ ಮೂವರು ಮಹಿಳೆಯರು ಸಾರ್ವಜನಿಕವಾಗಿ ಥಳಿಸಿ ಆಕೆಯ ಕಾಲಿನ ಮೇಲೆ ಕಬ್ಬಿಣದ ಬಿಸಿ ರಾಡ್ ನಿಂದ ಬರೆ ಎಳೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ತಿರುವನಂತಪುರಂನಲ್ಲೂ ತೃತೀಯ ಲಿಂಗಿಗೆ ಸಾರ್ವಜನಿಕರು ಥಳಿಸಿದ ಘಟನೆ ನಡೆದಿತ್ತು.