ಭೋಪಾಲ್: ಕಳ್ಳನೊಬ್ಬ ಅಂಗಡಿಯೊಂದರಲ್ಲಿ 2.45 ಲಕ್ಷ ರೂ. ಹಣ ಕಳ್ಳತನ ಮಾಡಿ, ಈ ಹಣವನ್ನು (Money) ಆರೇ ತಿಂಗಳಲ್ಲಿ ತಂದುಕೊಡ್ತೀನಿ ಎಂದು ಪತ್ರ ಬರೆದಿಟ್ಟು ಹೋಗಿರುವುದು ಮಧ್ಯಪ್ರದೇಶದ (Madhya Pradesh) ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ.
ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಮೀದಾರ್ ಮೊಹಲ್ಲಾದಲ್ಲಿರುವ ಜುಜರ್ ಅಲಿ ಬೊಹ್ರಾ ಅವರ ಅಂಗಡಿಯಲ್ಲಿ ಭಾನುವಾರ ಮಧ್ಯರಾತ್ರಿ ಕಳ್ಳತನ ನಡೆದಿದೆ. ಕಳ್ಳ 2.45 ಲಕ್ಷ ರೂ. ಕದ್ದಿದ್ದಾನೆ. ಬಳಿಕ ಟೈಪ್ ಮಾಡಿರುವ ಪತ್ರ ಇಟ್ಟಿದ್ದು, ಪತ್ರದಲ್ಲಿ ರಾಮ ನವಮಿಯಂದು ಮಾಡಿದ ಕೃತ್ಯಕ್ಕೆ ನಾನು ಕ್ಷಮೆ ಕೋರುತ್ತೇನೆ. ನಾನು ನಿಮ್ಮ ನೆರೆಹೊರೆಯಲ್ಲಿ ಇರುತ್ತೇನೆ. ಸಾಲದ ಹೊರೆ ಮತ್ತು ಸಾಲಗಾರರ ಕಿರುಕುಳದಿಂದ ಹಣ ಕದ್ದಿದ್ದೇನೆ. ಇನ್ನೂ ಆರು ತಿಂಗಳಲ್ಲಿ ಹಣವನ್ನು ಹಿಂದಿರುಗಿಸುತ್ತೇನೆ. ಆಗ ನೀವು ನನ್ನನ್ನು ಪೊಲೀಸರಿಗೆ ಒಪ್ಪಿಸಬಹುದು ಎಂದು ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಗ್ನಲ್ ಜಂಪ್ ಮಾಡಲು ಹೋಗಿ ರಸ್ತೆ ಮಧ್ಯೆ ಪ್ರಾಣ ಬಿಟ್ಟ ಬೈಕ್ ಸವಾರ
ತನಗೆ ಬೇಕಾದಷ್ಟು ಹಣ ಮಾತ್ರ ತೆಗೆದುಕೊಂಡಿದ್ದೇನೆ ಮತ್ತು ಉಳಿದದ್ದನ್ನು ಬ್ಯಾಗ್‌ನಲ್ಲೇ ಬಿಟ್ಟಿದ್ದೇನೆ. ನಾನು ಕಳ್ಳತನ ಮಾಡಲು ಬಯಸುವುದಿಲ್ಲ, ಆದರೆ ಈಗ ನನಗೆ ಬೇರೆ ದಾರಿಯಿಲ್ಲ. ಈಗ ಹಣ ಕದಿಯುವುದು ಬಹಳ ಮುಖ್ಯವಾಗಿದೆ. ಪತ್ರದಲ್ಲಿರುವುದೆಲ್ಲ ಸತ್ಯ ಎಂದು ಬರೆದಿದ್ದಾನೆ.
ಅಂಗಡಿ ಮಾಲೀಕರು ಒಂದು ಚೀಲದಲ್ಲಿ 2.84 ಲಕ್ಷ ರೂ.ಗಳನ್ನು ಇಟ್ಟಿದ್ದರು. ಅದರಲ್ಲಿ ಸುಮಾರು 2.45 ಲಕ್ಷ ರೂ.ಗಳನ್ನು ಕದ್ದಿದ್ದರೆ, 38,000 ರೂ.ಗಳನ್ನು ಕಳ್ಳ ಹಾಗೆ ಉಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ
