ಉಪವಾಸ ಮಾಡದ್ದಕ್ಕೆ ಚಾಕುವಿನಿಂದ ಪತ್ನಿಗೆ ಇರಿದು ಆತ್ಮಹತ್ಯೆ ಮಾಡ್ಕೊಂಡ ಪತಿ

HUSBAND KILLS WIFE

ನವದೆಹಲಿ: ಪತ್ನಿ ನನಗೋಸ್ಕರ ಉಪವಾಸ ವ್ರತ ಮಾಡಿಲ್ಲ ಎಂದು ಕೋಪಗೊಂಡ ಪತಿ ಚಾಕುವಿನಿಂದ ಪತ್ನಿಗೆ ಇರಿದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ದೆಹಲಿಯ ರೋಹಿಣಿ ಎಂಬಲ್ಲಿ ನಡೆದಿದೆ.

ಮಹಿಳೆಯರ ಹಬ್ಬವೆಂದೇ ಪ್ರಸಿದ್ಧಿಯಾಗಿರುವ ಕರ್ವಾ ಚೌತ್ ಹಬ್ಬದ ಸಂದರ್ಭದಲ್ಲಿ ಪತ್ನಿಯರು ಉಪವಾಸ ಮಾಡುವುದು ವಿಶೇಷ. ಆದರೆ ಪತ್ನಿ ಉಪವಾಸ ಮಾಡಿಲ್ಲ ಎಂದು ಚಾಕುವಿನಿಂದ ಇರಿದು ನಂತರ ತಾನು ಕಟ್ಟಡದಿಂದ ಜಿಗಿದು ದೆಹಲಿಯ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯಕ್ಕೆ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಪತಿ ಜಸ್ವಿಂದರ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಏನಿದು ಘಟನೆ?: ಈ ದಂಪತಿ ಮದುವೆಯಾಗಿ 5 ವರ್ಷಗಳಾಗಿದ್ದು, ಇವರಿಗೆ 4 ವರ್ಷದ ಮಗಳು ಇದ್ದಾಳೆ. ಆದರೆ ಇವರಿಬ್ಬರ ನಡುವೆ ಸಂಸಾರಿಕ ಜೀವನ ಸರಿಯಿಲ್ಲದ ಕಾರಣ ಇತ್ತೀಚೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕೆಲವು ತಿಂಗಳಿಂದ ಪ್ರತ್ಯೇಕವಾಗಿ ಜೀವನ ಮಾಡುತ್ತಿದ್ದರು.

ನ್ಯಾಯಾಲಯ ತಂದೆ ಸಿಂಗ್‍ಗೆ ವಾರದ ಕೊನೆಯಲ್ಲಿ ಹೆಂಡತಿ ಮನೆಗೆ ಹೋಗಿ ಮಗಳನ್ನು ಭೇಟಿಯಾಗಬೇಕು ಎಂದು ತಿಳಿಸಿತ್ತು. ಅದರಂತೆ ಭಾನುವಾರ ಮಗಳನ್ನು ನೋಡಲು ಪತ್ನಿಯ ಮನೆಗೆ ಬಂದಿದ್ದಾನೆ. ಅಂದು ಹಬ್ಬದ ದಿನವಾದ್ದರಿಂದ ಹೆಂಡತಿ ಉಪವಾಸ ಮಾಡಿಲ್ಲ ಎಂದು ಕೋಪಗೊಂಡು ಟೆರೆಸ್ ಮೇಲೆ ಮಾತನಾಡಬೇಕು ಎಂದು ಕರೆದುಕೊಂಡು ಹೋಗಿದ್ದಾನೆ. ಮಗಳು ಕೂಡ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾಳೆ.

ಟೆರೆಸ್ ಮೇಲೆ ಇಬ್ಬರ ನಡುವೆ ಮಾತುಕತೆ ಪ್ರಾರಂಭವಾಗಿ ಕೊನೆಗೆ ಜಗಳವಾಗಿ ಕೋಪದಿಂದ ಸಿಂಗ್ ಚಾಕುವಿನಿಂದ ಹೆಂಡತಿಗೆ ಇರಿದಿದ್ದಾನೆ. ನಂತರ ನೆರೆಹೊರೆಯವರು ಕಿರುಚಾಟ ಕೇಳಿ ಓಡಿ ಬಂದಿದ್ದಾರೆ. ಗಾಬರಿಗೊಂಡ ಸಿಂಗ್ 4 ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ನೆರೆಹೊರೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಿಂಗ್ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ತಿಂಗಳಿಂದ ತನ್ನ ಪೋಷಕರ ಜೊತೆ ವಾಸವಿದ್ದ ಎಂದು ಪೊಲೀಸರು ಹೇಳಿದರು.

 

Comments

Leave a Reply

Your email address will not be published. Required fields are marked *