Connect with us

Crime

50 ಸಹಪಾಠಿಗಳ ಮುಂದೆ ಅಪ್ರಾಪ್ತೆಯನ್ನು ಪಾಗಲ್ ಪ್ರೇಮಿ ಚಾಕುವಿನಿಂದ ಇರಿದು ಕೊಂದೇಬಿಟ್ಟ!

Published

on

ಲಕ್ನೋ: ಅಪ್ರಾಪ್ತ ಪ್ರೇಯಸಿಯನ್ನ ಆಕೆಯ 50 ಸಹಪಾಠಿಗಳು ಮತ್ತು ಶಿಕ್ಷಕರ ಮುಂದೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.

16 ವರ್ಷದ ಬಾಲಕಿಯ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯನ್ನು ಕೊಲೆಗೈದ ಅಮರ್‍ಪಾಲ್ ಸಿಂಗ್(24) ನಂತರ ರೈಲಿನ ಹಳಿಯಲ್ಲಿ ಮಲಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈ ಸಂದರ್ಭದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಕಳೆದ ಕೆಲ ದಿನಗಳಿಂದ ಬಾಲಕಿ ಹಾಗೂ ಅಮರ್‍ಪಾಲ್ ನಡುವೆ ಪ್ರೇಮ ಸಂಬಂಧವಿದ್ದು, ಇಬ್ಬರು ಫೋನ್‍ನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಿದ್ದರು. ಆದರೆ ಇವರಿಬ್ಬರ ವಿವಾಹಕ್ಕೆ ಬಾಲಕಿಯ ಪೋಷಕರು ಒಪ್ಪಿಕೊಂಡಿರಲಿಲ್ಲ. ಪೋಷಕರ ವಿರೋಧಕ್ಕೆ ಕೋಪಗೊಂಡಿದ್ದ ಆರೋಪಿ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದ.

ಬುಧವಾರ ಬಾಲಕಿ ಶಾಲೆಯನ್ನು ಮುಗಿಸಿಕೊಂಡು 50 ಮಂದಿ ತನ್ನ ಸಹಪಾಠಿಗಳು ಮತ್ತು ಶಿಕ್ಷಕರ ಜೊತೆ ಮನೆಗೆ ತೆರಳುತ್ತಿದ್ದಳು. ಈ ಸಂದರ್ಭದಲ್ಲಿ ಗಂಗೇರು ಗ್ರಾಮದ ಬಳಿ ಆರೋಪಿ ಬಾಲಕಿಯ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಶಿಕ್ಷಕಿಯೊಬ್ಬರು ಬಾಲಕಿಯನ್ನು ಕಾಪಾಡಲು ಮುಂದಾಗಿದ್ದಾರೆ. ಆದರೆ ಅವರಿಗೂ ಈ ಘಟನೆಯಲ್ಲಿ ಗಾಯಗಳಾಗಿವೆ. ಬಾಲಕಿ ನಮ್ಮ ಮನೆಯಲ್ಲಿ ಮದುವೆಗೆ ಒಪ್ಪಲ್ಲ ಎಂದು ಹೇಳಿದ್ದಾಳೆ. ಆದರೆ ಆರೋಪಿ ಯಾರ ಮಾತನ್ನು ಕೇಳಿಸಿಕೊಳ್ಳದೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಯಸಿಯನ್ನು ಕೊಲೆ ಬಳಿಕ ತಾನು ಆತ್ಯಹತ್ಯೆ ಮಾಡಿಕೊಳ್ಳಲು ಮೊದಲೇ ನಿರ್ಧಾರ ಮಾಡಿಕೊಂಡಿದ್ದ ಅಮರ್‍ಪಾಲ್ ಸಿಂಗ್ ರೈಲಿನ ಹಳಿ ಮೇಲೆ ಮಲಗಿ ಸಾಯಲು ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಪೊಲೀಸರು ಆತನನ್ನು ಕಾಪಾಡಿ ಬಂಧಿಸಿದ್ದಾರೆ.

ಆರೋಪಿ ಅಮರ್‍ಪಾಲ್ ನನಗೆ ಜೀವನವೇ ಬೇಡವಾಗಿದೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹಳಿಯ ಹತ್ತಿರ ಹೋಗಿದ್ದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ. ಜುಲೈನಲ್ಲಿ ಬಾಲಕಿ ಹಲವಾರು ದಿನಗಳ ಕಾಲ ಶಾಲೆಗೆ ಹಾಜರಾಗಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

Click to comment

Leave a Reply

Your email address will not be published. Required fields are marked *