ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೇ ಚಾಕು ಇರಿದ!

Public TV
1 Min Read
ENGAGEMENT

ಬೆಂಗಳೂರು: ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ವ್ಯಕ್ತಿಯೊಬ್ಬ ಆತನ ಪತ್ನಿಗೆ ಚಾಕುವಿನಿಂದ ಇರಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ದಿವ್ಯಶ್ರೀ (26)ಗೆ ಚಾಕು ಇರಿತಕ್ಕೊಳಗಾದವಳು. ಜಯಪ್ರಕಾಶ್ (32) ಚಾಕು ಇರಿದ ಪತಿ. ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ಫೆಬ್ರವರಿ 15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ವಿವರ: ಜಯಪ್ರಕಾಶ್ ಹಾಗೂ ದಿವ್ಯಶ್ರೀ ಪರಸ್ಪರ ಪ್ರೀತಿಸಿ 2019 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ಮದುವೆಗೆ ಪೋಷಕರ ವಿರೋಧವಿತ್ತು. ಹೀಗಾಗಿ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅನಾರೋಗ್ಯ ಹಿನ್ನೆಲೆ ಮನೆಯ ಖರ್ಚೆಲ್ಲ ಪತ್ನಿಯೇ ನೋಡಿಕೊಳ್ಳುತ್ತಿದ್ದರು. ಮೊದಲು ಮೂಡಲಪಾಳ್ಯದಲ್ಲಿ ಮನೆಮಾಡಿಕೊಂಡು ದಂಪತಿ ವಾಸವಿದ್ದರು.

ಈ ಸಂದರ್ಭದಲ್ಲಿ ನಿನಗೆ ಅಕ್ರಮ ಸಂಬಂಧ ಇದೆ ಎಂದು ಪ್ರತಿದಿನ ಪತಿ ಗಲಾಟೆ ಮಾಡುತ್ತಿದ್ದನು. ಫೋನಿನಲ್ಲಿ ಯಾರದ್ದೊ ಜೊತೆಗೆ ಮಾತನಾಡುತ್ತೀಯಾ ಎಂದು ಹಲ್ಲೆ ಮಾಡುತ್ತಿದ್ದನು. ಈ ಗಲಾಟೆಯ ನಡುವೆಯೇ ದಂಪತಿ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಇದೀಗ ತಂಗಿಯ ಎಂಗೆಜ್ಮೆಂಟ್‍ಗೆ ಬರ್ಲಿಲ್ಲ ಎಂದು ಜಯಪ್ರಕಾಶ್, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.

ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ (Kamakshipalya Police Station) ಎಫ್‍ಐಆರ್ ದಾಖಲಾಗಿದೆ. ಆರೋಪಿ ಜಯಪ್ರಕಾಶ್ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.

Share This Article