ಕಳ್ಳತನ ಮಾಡಲು ಬಾರದಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ

Public TV
1 Min Read
Hassan Stab copy
ಚಾಕು ಇರಿದ ಆರೋಪಿ

ಚಿತ್ರದುರ್ಗ/ಹಾಸನ: ಕಬ್ಬಿಣ ಕುಯ್ದು ಕಳ್ಳತನ (Theft) ಮಾಡಲು ಬರಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದಿರುವ ಘಟನೆ ಹಾಸನ (Hassan) ನಗರದ ಎನ್.ಆರ್.ವೃತ್ತದಲ್ಲಿರುವ ಬಾರ್‌ವೊಂದರಲ್ಲಿ ನಡೆದಿದೆ.

ಚಿತ್ರದುರ್ಗ (Chitradurga) ಮೂಲದ ಚಿತ್ರಲಿಂಗೇಶ್ವರ ಅಲಿಯಾಸ್ ಶಿವಣ್ಣ ಗಾಯಾಳು. ಚಿತ್ರಲಿಂಗೇಶ್ವರ ನಗರದ ಸಿಟಿ ಬಸ್ ನಿಲ್ದಾಣದ ಹತ್ತಿರ ವಾಸವಾಗಿದ್ದು, ಗುಜರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಸಂಜೆ ಎನ್.ಆರ್.ಸರ್ಕಲ್‌ನಲ್ಲಿದ್ದಾಗ ಹೊಳೇನರಸೀಪುರ ತಾಲೂಕಿನ, ಓಡನಹಳ್ಳಿ ಗ್ರಾಮದ ಚೇತು ಅಲಿಯಾಸ್ ಚೇತನ್ ಎಂಬಾತ ಬಂದು ಮದ್ಯಪಾನ ಮಾಡೋಣ ಬಾ ಎಂದು ಕರೆದಿದ್ದಾನೆ. ಇಬ್ಬರು ಎನ್.ಆರ್.ಸರ್ಕಲ್‌ನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯಪಾನ ಮಾಡುತ್ತಿದ್ದಾಗ, ಎಲ್ಲೋ ಒಂದು ಕಡೆ ಕಬ್ಬಿಣ ಇದೆ. ಅದನ್ನು ಇಬ್ಬರು ಸೇರಿ ಕುಯ್ದುಕೊಂಡು ಬಂದು ಮಾರಾಟ ಮಾಡೋಣ ಎಂದು ಚೇತು ಕರೆದಿದ್ದಾನೆ. ಇದನ್ನೂ ಓದಿ: Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

ನನಗೆ ತಿರುಗಾಡಲು ಆಗುವುದಿಲ್ಲ. ರಾತ್ರಿ 9:30 ಆಗಿದೆ. ಹಾಗಾಗಿ ನಾನು ಬರುವುದಿಲ್ಲವೆಂದು ಚಿತ್ರಲಿಂಗೇಶ್ವರ ಹೇಳಿದ್ದಾನೆ. ಇದರಿಂದ ಸಿಟ್ಟಾದ ಚೇತು, ನಾನು ನಿನಗೆ ಎಣ್ಣೆ ಕುಡಿಸಿ, ಊಟ ಕೊಡಿಸಿದ್ದೇನೆ. ನೀನೇನಾದರೂ ಬರಲಿಲ್ಲವೆಂದರೆ ನಿನ್ನನ್ನು ಮುಗಿಸಿ ಬಿಡುತ್ತೇನೆಂದು ಹೆದರಿಸಿದ್ದಾನೆ. ಬಾರ್‌ನಿಂದ ಹೊರಗೆ ಬಂದಾಗ ತನ್ನ ಜೇಬಿನಲ್ಲಿದ್ದ ಸಣ್ಣ ಫೋಲ್ಡಿಂಗ್ ಚಾಕು ತೆಗೆದುಕೊಂಡು ಕುತ್ತಿಗೆ ಹಾಗೂ ಹೊಟ್ಟೆಗೆ ತಿವಿಯಲು ಬಂದಾಗ ಚಿತ್ರಲಿಂಗೇಶ್ವರ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೂ ಬಿಡದ ಚೇತು ಚಿತ್ರಲಿಂಗೇಶ್ವರ ಎಡಕಣ್ಣಿನ ಹತ್ತಿರ ಹಾಗೂ ಎಡ ಮೊಣಕೈಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ಚಿತ್ರಲಿಂಗೇಶ್ವರ ತಪ್ಪಿಸಿಕೊಂಡಿದ್ದು, ತೀವ್ರ ರಕ್ತಸ್ರಾವವಾಗಿ ಬಿದ್ದವನನ್ನು ಸ್ಥಳೀಯರು ಚಿಕಿತ್ಸೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನೀವು ರಾಜ್ಯದ ಮುಖ್ಯಮಂತ್ರಿಗಳೋ or ವಿಧಾನಸೌಧ ಮೆಟ್ಟಿಲುಗಳ ಮುಖ್ಯಮಂತ್ರಿಗಳೋ: ಸಿದ್ದರಾಮಯ್ಯಗೆ ಹೆಚ್‌ಡಿಕೆ ಟಾಂಗ್‌

Share This Article