ಬೀಜಿಂಗ್: ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ, ಅದು ಜನ್ಮ ಜನ್ಮದ ಅನುಬಂಧ ಅನ್ನೋ ಮಾತಿದೆ. ಹಾಗೇ ಮದುವೆ ತಡವಾದ್ರೆ, ಇವನ/ಇವಳ ಹಣೇಲಿ ಬರೆದಿರೋರು ಎಲ್ಲಿದ್ದಾರೋ ಅಂತ ಕೂಡ ಕೆಲವರು ಹೇಳ್ತಾರೆ. ಹಾಗೇ ಜೀವನ ಸಂಗಾತಿಯನ್ನ ಭೇಟಿಯಾಗೋ ಮುಂಚೆಯೇ ಅಪರಿಚಿತರಾಗಿ ಇಬ್ಬರೂ ಒಂದೇ ಕಡೆ ಕಾಣಿಸಿಕೊಂಡಿದ್ದರೆ? ಅಯ್ಯೊ ಏನ್ ಹೇಳ್ತೀರಾ… ಅದೆಲ್ಲಾ ಸಿನಿಮಾದಲ್ಲಿ ಮಾತ್ರ.. ಒಂದು ವೇಳೆ ಒಂದೇ ಸ್ಥಳದಲ್ಲಿ ಓಡಾಡಿದ್ರೂ ಇವರೇ ಅಂತ ಹೇಗೆ ಗೊತ್ತಾಗುತ್ತೆ ಅಂತಿದ್ರೆ ಈ ಸ್ಟೋರಿ ಕೇಳಿ.
ಚೀನಾದ ಈ ದಂಪತಿ ತಾವು ಭೇಟಿಯಾದ 11 ವರ್ಷಗಳ ಹಿಂದೆಯೇ ಕಾಕತಾಳಿಯವೆಂಬಂತೆ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದು, ಇವರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Advertisement
Advertisement
ಚೀನಾದ ಯೀ ಮತ್ತು ಅವರ ಪತ್ನಿ ಕ್ಸೂ 2011ರಲ್ಲಿ ಪರಸ್ಪರ ಭೇಟಿಯಾಗಿ ಲವ್ ಮಾಡಿ ಮದುವೆಯಾಗಿದ್ದು, ಈಗ ಅವರಿಗೆ ಅವಳಿ ಜವಳಿ ಹೆಣ್ಣುಮಕ್ಕಳಿದ್ದಾರೆ. ಆದ್ರೆ ಇವರಿಬ್ಬರು ತಮಗೇ ಗೊತ್ತಿಲ್ಲದಂತೆ 2000 ಇಸವಿಯ ಜುಲೈನಲ್ಲಿ ಒಂದೇ ಸ್ಥಳಕ್ಕೆ ಭೇಟಿ ನೀಡಿದ್ದರು.
Advertisement
ಆಗ ಅಪರಿಚಿತರಾಗಿದ್ದ ಇಬ್ಬರೂ ಕಿಂಗ್ಡಾವೋದ ಮೇ ಫೋರ್ತ್ ಸ್ಕ್ವೇರ್‍ಗೆ ಭೇಟಿ ನೀಡಿದ್ದರು. ಅಷ್ಟೇ ಆಗಿದ್ರೂ ಅದು ಗೊತ್ತಾಗ್ತಿರಲಿಲ್ಲವೇನೋ. ಆದ್ರೆ ಇಬ್ಬರೂ ಒಂದೇ ಸ್ಥಳದಲ್ಲಿ ಅದೇ ಸಮಯಕ್ಕೆ ಫೋಟೋ ತೆಗೆದುಕೊಂಡಿದ್ದರು. ಕ್ಸೂ ತೆಗಿಸಿಕೊಂಡಿದ್ದ ಫೋಟೋದಲ್ಲಿ ಹಿಂಬದಿಯಲ್ಲಿ ವ್ಯಕ್ತಿಯೊಬ್ಬರು ಕಾಣಿಸುತ್ತಾರೆ. ಫೋಟೋ ತೆಗೆದ 11 ವರ್ಷಗಳ ಬಳಿಕ ಅದೇ ವ್ಯಕ್ತಿಯನ್ನ ಭೇಟಿಯಾಗಿ, ಪ್ರೀತಿಸಿ ಮದುವೆಯಾಗಿದ್ದಾರೆ.
Advertisement
ಕ್ಸೂ ತನ್ನ ತಾಯಿಯೊಂದಿಗೆ ಮೇ ಫೋರ್ತ್ ಸ್ಕ್ವೇರ್‍ಗೆ ಹೋಗಿದ್ದರು. ಆಗ ಅವರ ತಾಯಿಗೆ ಮೂರು ತಿಂಗಳ ಹಿಂದಷ್ಟೇ ಆಪರೇಷನ್ ಆಗಿದ್ದು, ವಿಹಾರ್ಕಕಾಗಿ ಅಲ್ಲಿಗೆ ಹೋಗಿದ್ದರು. ಕಾಕತಾಳಿಯವೆಂಬಂತೆ ಯೀ ಕೂಡ ತನ್ನ ಪ್ರವಾಸ ತಂಡದೊಂದಿಗೆ ಸ್ಕ್ವೇರ್‍ಗೆ ಭೇಟಿ ನೀಡಿದ್ದರು. ಯೀ ಅವರ ತಾಯಿ ಪ್ರವಾಸಕ್ಕೆ ಬುಕ್ ಮಾಡಿದ ನಂತರ ಅಪೆಂಡಿಕ್ಸ್ ನಿಂದ ಬಳಲುತ್ತಿದ್ದ ಕಾರಣ ತನ್ನ ಬದಲಿಗೆ ಮಗನಿಗೆ ಪ್ರವಾಸಕ್ಕೆ ಹೋಗುವಂತೆ ಹೇಳಿದ್ದರಿಂದ ಯೀ ಅಲ್ಲಿಗೆ ಭೇಟಿ ನೀಡುವಂತಾಗಿತ್ತು.
ಯೀ ತನ್ನ ಹೆಂಡತಿಯ ಫೋಟೋ ನೋಡಿದಾಗ ಹಿಂದೆ ಇರುವ ವ್ಯಕ್ತಿ ತಾನೇ ಎಂಬುದನ್ನ ಕೂಡಲೇ ಕಂಡುಹಿಡಿದಿದ್ದಾರೆ. ಫೋಟೋ ನೋಡಿದಾಗ ನನಗೆ ಆಶ್ಚರ್ಯವಾಯ್ತು. ಜೊತೆಗೆ ಮೈಯೆಲ್ಲಾ ರೋಮಾಂಚನವಾಯ್ತು. ಫೋಟೋಗಳಲ್ಲಿ ನಾನು ಈ ರೀತಿ ಪೋಸ್ ಕೊಡ್ತೀನಿ. ನಾನೂ ಕೂಡ ಅಲ್ಲೇ ಫೋಟೋ ತೆಗೆದುಕೊಂಡಿದ್ದೆ. ಅಲ್ಲೂ ಅದೇ ಪೋಸ್, ಬೇರೆ ಆಂಗಲ್ ಅಷ್ಟೇ ಎಂದು ಯೀ ಇಲ್ಲಿನ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ಕೊನೆಗೆ ಯೀ ತನ್ನ ಫೋಟೋವನ್ನೂ ಹುಡುಕಿದ್ದು, ಎರಡೂ ಫೋಟೋಗಳನ್ನ ಪಕ್ಕದಲ್ಲಿ ಇಟ್ಟು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕೂಡಲೇ ವೈರಲ್ ಆಗಿದೆ. ದಂಪತಿಯ ಸ್ನೇಹಿತರು ಇದನ್ನ ನೋಡಿ ನಿಮ್ಮಿಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ.