ಚೆನ್ನೈ: ಮದುವೆಗೆ ನಿರಾಕರಿಸಿದ್ದಕ್ಕಾಗಿ ದುಷ್ಕರ್ಮಿಯೊಬ್ಬ ಶಾಲೆಯಲ್ಲೇ (School) ಶಿಕ್ಷಕಿಯ (Teacher) ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ (Thanjavur) ನಡೆದಿದೆ.
ಕೊಲೆಯಾದ ಶಿಕ್ಷಕಿಯನ್ನು ರಮಣಿ (26) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಮದನ್ (30) ಎಂದು ಗುರುತಿಸಲಾಗಿದೆ. ಆತ ರಮಣಿಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅವರ ಕುತ್ತಿಗೆಗೆ ಆಳವಾದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ರಮಣಿಯವರು ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಣಂ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ರಮಣಿ ಹಾಗೂ ಮದನ್ ಕುಟುಂಬ ಭೇಟಿಯಾಗಿ ಮದುವೆಯ ವಿಚಾರ ಚರ್ಚಿಸಿದ್ದರು. ಈ ವೇಳೆ ಮದುವೆ ಪ್ರಸ್ತಾಪವನ್ನು ರಮಣಿಯವರು ತಿರಸ್ಕರಿಸಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.
ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮಿಳಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ತಕ್ಷಣವೇ ವಿದ್ಯಾರ್ಥಿಗಳಿಗೆ (Students) ಕೌನ್ಸೆಲಿಂಗ್ ನಡೆಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಶಾಲೆಯ ಭೇಟಿಗೆ ತೆರಳಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.
ಶಿಕ್ಷಕರ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಹಲ್ಲೆಕೋರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.