ಇಂಪಾಲ: ಮಣಿಪುರದ ಹಿಂಸಾಚಾರ (Manipur Violence) ಪೀಡಿತ ಜಿರಿಬಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರ ನಡುವಿನ ಘರ್ಷಣೆಯಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಕೆ ಅಥೌಬಾ (21) ಎಂಬ ಯುವಕ ಸಾವನ್ನಪ್ಪಿದ್ದಾನೆ. ಯುವಕನ ಸಾವಿಗೆ ಕಾರಣವಾದ ಬುಲೆಟ್ ಯಾರದ್ದು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಭಟನಾಕಾರರು, ಮಣಿಪುರದ ವಿಶೇಷ ಪೊಲೀಸ್ ಕಮಾಂಡೋಗಳು ಗುಂಪನ್ನು ಚದುರಿಸಲು ಗುಂಡು ಹಾರಿಸಿದ್ದಾರೆ. ಈ ವೇಳೆ ಅಥೌಬಾ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಪ್ರತಿಭಟನಾಕಾರರ ಗುಂಪು ಭಾನುವಾರ ರಾತ್ರಿ ವಿವಿಧ ನಾಯಕರ ಮನೆಗಳು ಮತ್ತು ರಾಜಕೀಯ ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಹಲವಾರು ವಸ್ತುಗಳನ್ನು ಧ್ವಂಸ ಮಾಡಿದೆ. ಪ್ರತಿಭಟನಾಕಾರರು ನ.11 ರಂದು ನಡೆದ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳ ಹತ್ಯೆಯನ್ನು ಖಂಡಿಸಿ ಪ್ರತಿಭಟಿಸುತ್ತಿದ್ದರು. ರಾಜ್ಯ ರಾಜಧಾನಿ ಇಂಫಾಲದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಂ ರಂಜನ್ ಮತ್ತು ಮೂವರು ಶಾಸಕರು ಸೇರಿದಂತೆ ಕನಿಷ್ಠ ಇಬ್ಬರು ಮಂತ್ರಿಗಳ ಮನೆಗಳ ಹೊರಗೆ ಗುಂಪು ಪ್ರತಿಭಟನೆ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂ ಪೊಲೀಸರು ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಇತ್ತೀಚೆಗೆ ಶಂಕಿತ ಕುಕಿ ಉಗ್ರರ ಪೈಕಿ ಹತ್ತು ಮಂದಿಯನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಗಿತ್ತು. ಮಣಿಪುರದ ಕುಕಿ ಪ್ರಾಬಲ್ಯದ ಚುರಾಚಂದ್‌ಪುರಕ್ಕೆ ಸಾಗಿಸಲು ಆಸ್ಪತ್ರೆಯಿಂದ 10 ಶವಗಳನ್ನು ಹೊರತೆಗೆಯಲು ಯತ್ನಿಸಿದ ಪೊಲೀಸರನ್ನು ಪ್ರತಿಭಟನಾಕಾರರು ತಡೆದಿದೆ ಎಂದು ವರದಿಯಾಗಿದೆ.