ನವದೆಹಲಿ: ತನ್ನ ಮನೆಯ ನಾಯಿಗೆ ಕಲ್ಲು ಹೊಡೆದಿದ್ದಕ್ಕೆ ವ್ಯಕ್ತಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಲೆಗೈದ ಅಮಾನವೀಯ ಘಟನೆಯೊಂದು ನವದೆಹಲಿಯಲ್ಲಿ ನಡೆದಿದೆ.
ಮೃತ ದುರ್ದೈವಿ ವ್ಯಕ್ತಿಯನ್ನು ಅಫಾಖ್(30) ಎಂದು ಗುರುತಿಸಲಾಗಿದೆ. ಈ ಘಟನೆ ಉತ್ತರ ದೆಹಲಿಯ ವೆಲ್‍ಕಮ್ ಕಾಲೊನಿಯಲ್ಲಿ ನಡೆದಿದೆ.
ಘಟನೆ ವಿವರ:
ಅಫಾಖ್ ವೆಲ್ ಕಮ್ ಕಾಲೋನಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅವರನ್ನು ನೋಡಿ ನಾಯಿಯೊಂದು ಜೋರಾಗಿ ಬೊಗಳಿದೆ. ಅಲ್ಲದೇ ಕಚ್ಚಲು ಕೂಡ ಪ್ರಯತ್ನಿಸುತ್ತಿತ್ತು. ಇದರಿಂದ ಭಯಗೊಂಡ ಅಫಶಖ್ ತನ್ನ ರಕ್ಷಣೆಗಾಗಿ ಅಲ್ಲೇ ಇದ್ದ ಕಲ್ಲನ್ನು ಎತ್ತಿ ನಾಯಿ ಕಡೆ ಎಸದಿದ್ದಾರೆ. ಇವೆಲ್ಲವನ್ನು ಮನೆಯೊಳಗಿಂದ ಮಾಲೀಕ ಮೆಹ್ತಾಬ್ ಗಮನಿಸಿದ್ದಾನೆ.
ತನ್ನ ಮನೆಯ ನಾಯಿಗೆ ಕಲ್ಲು ಹೊಡೆದಿದ್ದರಿಂದ ಸಿಟ್ಟುಗೊಂಡ ಮೆಹ್ತಾಬ್ ಮನೆಯೊಳಗಿಂದ ಪಿಸ್ತೂಲ್ ತಂದು ನೇರವಾಗಿ ಅಫಾಖ್ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅತುಲ್ ಥಾಕೂರ್ ವಿವರಿಸಿದ್ದಾರೆ.
ಈ ಮೊದಲು ಅಫಾಖ್ ಮತ್ತು ಮೆಹ್ತಾಬ್ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅಫ್ತಾಖ್ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ ಅದಾಗಲೇ ಅಫ್ತಾಖ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯ ಬಳಿಕ ಮಾಲೀಕ ಮೆಹ್ತಾಬ್ ಸ್ಥಳದಿಂದ ಕಾಲ್ಕಿತ್ತಿದ್ದು, ಸದ್ಯ ಪೊಲೀಸರ ಆತನ ಪತ್ತೆಗೆ ಬಲೆ ಬೀಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ನಾಯಿ ಮರಿಯ ವಿಚಾರವಾಗಿಯೇ ನಾಲ್ವರು ದುಷ್ಕರ್ಮಿಗಳು ಇಬ್ಬರು ಹುಡುಗರ ಮೇಲೆ ಕೋಲಿನಿಂದ ಹಿಗ್ಗಾಮುಗ್ಗವಾಗಿ ಥಳಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv