ಮುಂಬೈ: ಟಿಫನ್ ಜೊತೆಗೆ ಟೀ ನೀಡಲಿಲ್ಲ ಎಂದು ಮಾವನೇ ತನ್ನ ರಿವಾಲ್ವರ್‌ನಿಂದ ಸೊಸೆಗೆ ಗುಂಡು ಹಾರಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
42 ವರ್ಷದ ಮಹಿಳೆಯ ಹೊಟ್ಟೆಗೆ ಗುಂಡು ತಗುಲಿದ್ದು, ಇದೀಗ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು 76 ವರ್ಷದ ಕಾಶಿನಾಥ ಪಾಂಡುರಂಗ ಪಾಟೀಲ್ ಎಂದು ಗುರುತಿಸಲಾಗಿದ್ದು, ಇದೀಗ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆ ಯತ್ನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ. ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿಯ ಮತ್ತೋರ್ವ ಸೊಸೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಇದೀಗ ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಎಸಿ ಸ್ಫೋಟ – ಓರ್ವ ಸಾವು, ಐವರಿಗೆ ಗಾಯ
ಬೆಳಗಿನ ಚಹಾದ ಜೊತೆಗೆ ಸೊಸೆ ತನಗೆ ಉಪಹಾರವನ್ನು ನೀಡದೇ ಇದ್ದುದರಿಂದ ಆರೋಪಿ ಕೋಪಗೊಂಡಿದ್ದನು. ನಂತರ ತನ್ನ ರಿವಾಲ್ವರ್ ಹೊರ ತೆಗೆದು ತನ್ನ ಸೊಸೆಯ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಕೂಡಲೇ ಇತರ ಕುಟುಂಬಸ್ಥರು ಆಕೆಯನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಈ ಘಟನೆಗೆ ಬೇರೆ ಏನಾದರೂ ಕಾರಣವಿದೆಯೇ ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಸಂತೋಷ್ ಘಾಟೇಕರ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನದೊಳಗೆ ಪ್ರಯಾಣಿಕನ ಮೊಬೈಲ್ ಸ್ಫೋಟ – ಬೆಂಕಿ ನಂದಿಸಲು ಸಿಬ್ಬಂದಿ ಹರಸಹಾಸ