ರಾಮನಗರ: ಜಿಲ್ಲೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅತ್ಯಾಚಾರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
9 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಸಲೀಂಗೆ 50 ಸಾವಿರ ರೂ. ದಂಡ ಮತ್ತು ಗಲ್ಲು ಶಿಕ್ಷೆ ವಿಧಿಸಿ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯದ 3ನೇ ಹೆಚ್ಚುವರಿ ನ್ಯಾಯಾಧೀಶ ಗೋಪಾಲಕೃಷ್ಣ ರೈ ಆದೇಶ ಪ್ರಕಟಿಸಿದ್ದಾರೆ.
2012 ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದೇ ಬೆಂಗಳೂರು ದಕ್ಷಿಣ ತಾಲೂಕಿನ ತಾವರೇಕರೆಯಲ್ಲಿ 9 ವರ್ಷದ ಬಾಲಕಿ ಹೀನಾ ಕೌಸರ್ ಎಂಬಾಕೆಯನ್ನು ಅತ್ಯಾಚಾರ ಮಾಡಿ ಕೊಲೆಗೈಯಲಾಗಿತ್ತು. ಬೀಡಿ ತರಲು ಅಂಗಡಿಗೆ ಕಳುಹಿಸಿದ್ದ ಸಂದರ್ಭದಲ್ಲಿ ನೆರೆಮನೆಯಲ್ಲಿದ್ದ ಬೆಂಗಳೂರಿನ ಗೋರಿಪಾಳ್ಯದ ಸಲೀಂ (35) ಆಕೆಯನ್ನು ಮನೆಯ ಒಳಗೆ ಕರೆದು ಅತ್ಯಾಚಾರ ಮಾಡಿ ನಂತರ ಕೊಲೆಗೈದಿದ್ದ. ನಂತರ ಆರೋಪಿ ಸಲೀಂನನ್ನು ಬಂಧಿಸಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ 23 ಕ್ಕೂ ಹೆಚ್ಚು ಸಾಕ್ಷಿಗಳು ಸಲೀಂ ವಿರುದ್ಧ ಸಾಕ್ಷಿ ನುಡಿದಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೂಡ ಕೃತ್ಯವನ್ನು ಸಾಬೀತುಪಡಿಸಿತ್ತು. ತೀರ್ಪು ಪ್ರಕಟವಾದ ಬಳಿಕ ಹೊರ ಬಂದ ಸಲೀಂ ವಾದ ಮಂಡಿಸಿದ್ದ ಸರ್ಕಾರಿ ಪರ ವಕೀಲರು ಹಾಗೂ ಮಾಧ್ಯಮದವರನ್ನು ಕಂಡು ಕೆಂಡಾಮಂಡಲವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೇ ಕೋರ್ಟ್ ಆವರಣದಲ್ಲಿ ಸಿಕ್ಕ ಕಲ್ಲನ್ನು ಮಾಧ್ಯಮದವರ ಮೇಲೆ ಹಾಗೂ ವಕೀಲರ ಮೇಲೆ ತೂರಿ ಪೊಲೀಸರ ಬಳಿ ಇದ್ದ ರೈಫಲ್ ಕಿತ್ತುಕೊಳ್ಳುವ ಯತ್ನ ನಡೆಸಿದ್ದಾನೆ.
ಆರೋಪಿಯ ಈ ವರ್ತನೆಯನ್ನು ನೋಡಿ ಪೊಲೀಸರು ಮೂಕರಂತೆ ವರ್ತಿಸಿದ್ದಾರೆ. ಅಲ್ಲದೇ ಅಪರಾಧಿಯನ್ನ ಕೇವಲ ಸಮಾಧಾನ ಪಡಿಸಲು ಮುಂದಾದರು.