Monday, 16th July 2018

Recent News

ಸಿಂಹದ ಮರಿ ಜೊತೆ ಸೆಲ್ಫೀ ತೆಗೆದು ಎಫ್‍ಬಿಯಲ್ಲಿ ಪೋಸ್ ಕೊಟ್ಟಿದ್ದ ವ್ಯಕ್ತಿ ಪೊಲೀಸರ ವಶಕ್ಕೆ

ಪ್ಯಾರಿಸ್: ಸಿಂಹದ ಮರಿಯನ್ನು ಬಾಡಿಗೆಗೆ ಪಡೆದು ಅದರ ಜೊತೆ ಸೆಲ್ಫೀ ತೆಗೆದುಕೊಂಡು ಫೇಸ್‍ಬುಕ್‍ನಲ್ಲಿ ಶೋ ಆಫ್ ಮಾಡಿದ್ದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದ ಘಟನೆ ಫ್ರಾನ್ಸ್‍ನಲ್ಲಿ ನಡೆದಿದೆ.

24 ವಯಸ್ಸಿನ ವ್ಯಕ್ತಿಯೊಬ್ಬ ಸಿಂಹದ ಮರಿ ಜೊತೆ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದ. ಇದನ್ನ ನೋಡಿದ್ದ ಪೊಲೀಸರು ಆತನನ್ನು ಟ್ರೇಸ್ ಮಾಡಿ ಮನೆಗೆ ಎಂಟ್ರಿ ಕೊಟ್ಟಿದ್ರು. ಆದ್ರೆ ಆತ ಆ ಸಿಂಹದ ಮರಿಯನ್ನ ಬೇರೆಲ್ಲೋ ಬಿಟ್ಟು ಬಂದಿದ್ದ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಅಪಾರ್ಟ್‍ಮೆಂಟ್‍ವೊಂದರಲ್ಲಿ ಅನಾಥವಾಗಿ ಬಿಡಲಾಗಿದ್ದ ಸಿಂಹದ ಮರಿಯನ್ನ ರಕ್ಷಣೆ ಮಾಡಿದ್ದಾರೆ.

ಬುಧವಾರ ಆತ ತಿಳಿಸಿದ್ದ ಖಾಲಿ ಅಪಾರ್ಟ್‍ಮೆಂಟ್ ಗೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಆಹಾರವಿಲ್ಲದೆ ಸೊರಗಿದ್ದ ಸಿಂಹದ ಮರಿಯನ್ನು ರಕ್ಷಿಸಿ, ಅದನ್ನು ಈಗ ಪ್ರಾಣಿಗಳನ್ನು ಆರೈಕೆ ಮಾಡುವ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಕಾಡುಪ್ರಾಣಿಯನ್ನ ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪದ ಮೇಲೆ ಅ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ.

ಪ್ಯಾರಿಸ್ ಅಗ್ನಿಶಾಮಕ ಸಿಬ್ಬಂದಿ ಸಿಂಹದ ಮರಿಯ ರಕ್ಷಣೆಯ ಫೋಟೋಗಳನ್ನ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕಾಡು ಪ್ರಾಣಿಗಳೆಂದರೆ ಸಾಕು ಪ್ರಾಣಿಗಳಂತಲ್ಲ ಅಥವಾ ಗೊಂಬೆಗಳಲ್ಲ ಎಂದು ಪ್ರತಿಯೊಬ್ಬರಿಗೂ ನೆನಪಿಸುವುದು ಬಹಳ ಮುಖ್ಯ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಸಿಂಹದ ಮರಿಯನ್ನ ರಕ್ಷಿಸಿದ್ದಕ್ಕೆ ಜನರು, ತಾಯಿಯಿಂದ ಬೇರೆಯಾದ ಮರಿಯನ್ನು ಕಾಪಾಡಿದ್ದಕ್ಕೆ ಧನ್ಯವಾದ ಎಂದು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ 2016ರಲ್ಲಿ ಪ್ಯಾರಿಸ್‍ನಲ್ಲಿ ಇದೇ ರೀತಿ ಸಿಂಹದ ಮರಿಯೊಂದನ್ನ ಅನಾಥ ಮಾಡಲಾಗಿತ್ತು. ಡ್ರಗ್ ಡೀಲರ್‍ಗಳು ಒಂದು ಫೋಟೋಗೆ ಕೆಲವು ಯೂರೋ ನಿಗದಿಪಡಿಸಿ ಮರಿಯನ್ನ ಬಾಡಿಗೆ ಕೊಡುತ್ತಿದ್ದರು ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *